ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ವಾರ್ಷಿಕ ಜಗನ್ನಾಥ ಯಾತ್ರೆ ಜುಲೈ 7ರಂದು ನಡೆಯಲಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ರಥಯಾತ್ರೆಗೆ 18 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ಮೆರವಣಿಗೆಯ ಮೇಲೆ ಹೆಚ್ಚಿನ ನಿಗಾ ಹೊಂದುವ ದೃಷ್ಟಿಯಿಂದ 1,733 ಬಾಡಿ- ವಾರ್ನ್ ಕ್ಯಾಮರಾ ಮೂಲಕ ಸೂಕ್ಷ್ಮವಾಗಿ ರಥಯಾತ್ರೆ ವೀಕ್ಷಿಸಲಾಗುವುದು. ಈ ಬಾಡಿವಾರ್ನ್ ಕ್ಯಾಮರಾಗಳು ಕಂಟ್ರೋಲ್ ರೂಮ್ನೊಂದಿಗೆ ಸಂಪರ್ಕಿಸಲಾಗುತ್ತದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ 20 ಡ್ರೋನ್ ಮತ್ತು 96 ಮೇಲ್ವಿಚಾರಣೆ ಕ್ಯಾಮರಾವನ್ನು 47 ಸ್ಥಳಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ 1400 ಸಿಸಿಟಿವಿ ಕ್ಯಾಮರಾಗಳನ್ನು ಮೆರವಣಿಗೆ ಸಾಗುವ ಮಾರ್ಗದಲ್ಲಿನ ಅಂಗಡಿ- ಮುಂಗಟ್ಟುಗಳಲ್ಲಿ ಅಳವಡಿಸಲಾಗಿದೆ.
ಈ ಸಂಬಂಧ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘವಿ ಮತ್ತು ಪೊಲೀಸ್ ಮಹಾನಿರ್ದೇಶಕ ವಿಕಾಸ್ ಸಹಾಯ್ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆ ನಡೆಸಿದ್ದು, ಧಾರ್ಮಿಕ ಕಾರ್ಯಕ್ರಮದ ಭದ್ರತಾ ಸಿದ್ಧತೆ ಕುರಿತು ಚರ್ಚಿಸಿದ್ದಾರೆ. ಅಹಮದಾಬಾದ್ ಪೊಲೀಸ್ ಕಮಿಷನರ್ ಜಿಎಸ್ ಮಲಿಕ್ ಸಭೆಯಲ್ಲಿ ರಥಯಾತ್ರೆಯ ವಿವಿಧ ಭದ್ರತಾ ಅಂಶಗಳ ಕುರಿತು ಸಭೆಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಸಿಎಂಗೆ ಮಾಹಿತಿ ನೀಡಿದ ಅವರು, ರಥಯಾತ್ರೆ ಸಾಗುವ ಅಹಮದಾಬಾದ್‌ನ 16 ಕಿ.ಮೀ. ಮಾರ್ಗದಲ್ಲಿ ಐಜಿ ಶ್ರೇಣಿಯ ಅಧಿಕಾರಿಗಳು ಸೇರಿದಂತೆ 18,784 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.