ಹೈದರಾಬಾದ್ : ಈ ಬಾರಿಯ 2024ರ ಲೋಕಸಭೆ ಚುನಾವಣೆ ದೇಶಾದ್ಯಂತ ರಂಗೇರಿದೆ. ಶನಿವಾರ ಚುನಾವಣೆ ಮತದಾನದ ದಿನಾಂಕವನ್ನು ಪ್ರಕಟಿಸಲಾಗಿದೆ. ಏಳು ಹಂತಗಳಲ್ಲಿ ನಡೆಯಲಿರುವ ಮತದಾನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಭದ್ರತಾ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ.
ಸುಮಾರು ದೇಶದೆಲ್ಲೆಡೆ 10.5 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸುವುದರ ಜೊತೆಗೆ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಮತದಾನದ ವೇಳೆ ಸಂಪೂರ್ಣ ಕಣ್ಗಾವಲು ಇಡಲಾಗುತ್ತಿದೆ. ಮತಗಟ್ಟೆಗಳ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರೊಂದಿಗೆ ಅರೆಸೇನಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜೊತೆಗೆ 1.5 ಕೋಟಿ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ಬಳಕೆ ಆಗಲಿದ್ದಾರೆ ಹಾಗೂ 55 ಲಕ್ಷ ಇವಿಎಂಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಏಪ್ರಿಲ್ 19 ರಿಂದ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಜೂನ್ 1 ರಂದು ಮುಕ್ತಾಯವಾಗಲಿದೆ. ದೇಶದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. 2019 ರಲ್ಲಿ ಸುಮಾರು 10 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇದಕ್ಕೂ ಹಿಂದೆ 2014 ರಲ್ಲಿ 9 ಲಕ್ಷ ಮತಗಟ್ಟೆಗಳನ್ನು ಮಾಡಲಾಗಿತ್ತು. 2019 ರಲ್ಲಿ, ಒಟ್ಟು ಮತದಾರರು ಸುಮಾರು 90 ಕೋಟಿಯಷ್ಟಿದ್ದರೆ, ಅದರಲ್ಲಿ 1.5 ಮತದಾರರು ಸುಮಾರು 18-19 ವರ್ಷ ವಯಸ್ಸಿನವರು. 2014ರ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 81.4 ಕೋಟಿ ಇತ್ತು.