ನವದೆಹಲಿ:ಇಡೀದೇಶದ ಜನತೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಹಾಗೂ ಬಹುನಿರೀಕ್ಷಿತ 2024ರ ಲೋಕಸಭೆ ಚುನಾವಣಾ ಫಲಿತಾಂಶ ಮಂಗಳವಾರ ಹೊರಬಿತ್ತು. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ, ಪ್ರಧಾನಿ ನರೇಂದ್ರ ಮೋದಿ ಅವರ ಲೆಕ್ಕಾಚಾರಗಳು ಹಾಗೂ ಮತದಾನೋತ್ತರ ಸಮೀಕ್ಷೆಗಳ ಭವಿಷ್ಯವನ್ನು ಮತದಾರ ಪ್ರಭು ತಲೆಕೆಳಗು ಮಾಡಿದ್ದಾನೆ. ಐತಿಹಾಸಿಕ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವಷ್ಟು ಸರಳ ಬಹುಮತವನ್ನು ಎನ್‌ಡಿಎ ಪಡೆದಿದೆ. ಆದರೆ, 400 ಕ್ಷೇತ್ರಗಳನ್ನು ಗೆಲ್ಲುವ ಕನಸು ನನಸಾಗಿಲ್ಲ. ಮತ್ತೊಂದೆಡೆ, ಸರಿಯಾಗಿ ಒಂದು ದಶಕದ ಬಳಿಕ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮತ್ತೆ ತನ್ನ ಹಿಡಿತ ಸಾಧಿಸುವಲ್ಲಿ ಯಶ ಕಂಡಿವೆ. ಬಹುಮತದ 'ಮ್ಯಾಜಿಕ್ ನಂಬರ್'ಗಾಗಿ ತೆರೆಮರೆಯಲ್ಲಿ ಕಾರ್ಯಾಚರಣೆಗಿಳಿದ ಸೂಚನೆಗಳನ್ನೂ ಪ್ರತಿಪಕ್ಷಗಳ 'ಇಂಡಿಯಾ' ಒಕ್ಕೂಟ ನೀಡಿದೆ. ಇದು ಮತ್ತೊಂದು ರೀತಿಯಲ್ಲಿ ದೇಶದ ರಾಜಕೀಯ ಸೃಷ್ಟಿಸಿದ ಕುತೂಹಲ!.
ಹೀಗಿದೆ ಮತದಾರನ ಮಹಾತೀರ್ಪು: ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಸುದೀರ್ಘ ಚುನಾವಣೆ ನಡೆದಿತ್ತು. ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬದಲ್ಲಿ ವಿಶ್ವದಾಖಲೆಯ 64.2 ಕೋಟಿ ಮತದಾರರು ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದ್ದರು. ಇಂದು ಏಕಕಾಲಕ್ಕೆ ಎಲ್ಲ 543 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ನಡೆದು ಅಂತಿಮ ಫಲಿತಾಂಶ ಹೊರಬಂದಿದೆ. ಕೇಂದ್ರ ಚುನಾವಣಾ ಆಯೋಗ ಸಂಜೆ 7:30ರವರೆಗೆ ಅಧಿಕೃತವಾಗಿ 197 ಕ್ಷೇತ್ರಗಳ ಫಲಿತಾಂಶ ಪ್ರಕಟಿಸಿತು. 346 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ತೋರಿಸಿದೆ. ಇದರಲ್ಲಿ ಬಿಜೆಪಿ 239 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, 109 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಪ್ರತಿಪಕ್ಷ ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದು, 43 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ನೇತೃತ್ವದ 'ಇಂಡಿಯಾ'ದ ಸಮಾಜವಾದಿ ಪಕ್ಷ 38, ತೃಣಮೂಲ ಕಾಂಗ್ರೆಸ್ 29, ಡಿಎಂಕೆ 22 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಬಹುತೇಕ ಗೆಲುವು ನಿಶ್ಚಿತವಾಗಿದೆ.
'ಚಾರ್ ಸೌ' ಅಲ್ಲ 'ತೀನ್ ಸೌ' ಗಡಿ ದಾಟಲಿಲ್ಲ ಎನ್‌ಡಿಎ: 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ, ಬಿಜೆಪಿ ಪರ ದೊಡ್ಡ ಅಲೆಯನ್ನೇ ಸೃಷ್ಟಿಸಿದ್ದರು. ಇದರ ಪರಿಣಾಮ ಎನ್‌ಡಿಎ ಮೈತ್ರಿಕೂಟ 'ಮ್ಯಾಜಿಕ್ ನಂಬರ್' 272ರ ಗಡಿಯನ್ನೂ ಮೀರಿ 354 ಸ್ಥಾನಗಳನ್ನು ಗೆದ್ದು ಭರ್ಜರಿ ಜಯಭೇರಿ ಬಾರಿಸಿತ್ತು. 2019ರಲ್ಲೂ ಸಹ ಮೋದಿ ಅಲೆಯಲ್ಲಿ ಬಿಜೆಪಿ ಏಕಾಂಗಿಯಾಗಿಯೇ 303 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಚುನಾವಣೆಯಲ್ಲೂ ಗೆಲುವಿನ ಅತ್ಯುತ್ಸಾಹದಲ್ಲೇ ಪ್ರಧಾನಿ ನರೇಂದ್ರ ಮೋದಿ 400ರ ಗಡಿದಾಟುವ ಮಹಾಘೋಷಣೆ ಮೊಳಗಿಸಿದ್ದರು. ರಾಮ ಮಂದಿರ ನಿರ್ಮಾಣ, ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ಬಿಜೆಪಿಯ ಇಂಥದ್ದೊಂದು ವಿಶ್ವಾಸಕ್ಕೆ ಮೂಲ ಕಾರಣವಾಗಿತ್ತು. ಆದರೆ ಈ ಸಂಗತಿಗಳು ಚುನಾವಣೆ ಹಾಗೂ ಅದರ ಫಲಿತಾಂಶದಲ್ಲಿ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಸ್ಪಷ್ಟವಾಗಿದೆ. ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಷ್ಟು ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.
ಬಿಜೆಪಿಗೆ ಹೊಡೆತ ಬಿದ್ದಿದ್ದೆಲ್ಲಿ?: ದೇಶದ ರಾಜಕಾರಣದ ಮೇಲೆ ಅತಿದೊಡ್ಡ ಪರಿಣಾಮ ಬೀರುವ ಹಾಗೂ ಅತ್ಯಧಿಕ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ನಿರ್ಣಾಯಕ. ಈ ಹಿಂದಿನ ಎರಡು ಸಾರ್ವತ್ರಿಕ ಚುನಾವಣೆಗಳಲ್ಲೂ ಈ ರಾಜ್ಯದಲ್ಲಿ ಕೇಸರಿ ಪಕ್ಷ ದೊಡ್ಡ ಮಟ್ಟದ ಹಿಡಿತ ಸಾಧಿಸಿತ್ತು. ಆದರೆ, ಈ ಸಲ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಜಂಟಿ ಹೋರಾಟದಲ್ಲಿ ಬಿಜೆಪಿ ಹಿಡಿತ ಸಡಿಲವಾಗಿದೆ. ಅಲ್ಲದೇ, ಬಿಜೆಪಿಗೆ ಬಲವಾದ ಹೊಡೆತವನ್ನೂ ಮತದಾರ ನೀಡಿದ್ದಾನೆ. 80 ಕ್ಷೇತ್ರಗಳ ಪೈಕಿ ಬಿಜೆಪಿ 32 ಸ್ಥಾನಗಳಿಗೆ ಮಾತ್ರ ಸೀಮಿತವಾಗಿದೆ. ಬಿಜೆಪಿ ಮೈತ್ರಿಪಕ್ಷಗಳಾದ ಆರ್ಎಲ್ಡಿ -2 ಮತ್ತು ಅಪ್ನಾ ದಳ -1 ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಇನ್ನೊಂದೆಡೆ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಸೀಟು ಗಳಿಕೆ ಕುಗ್ಗಿದೆ.