ನವದೆಹಲಿ: 94 ವರ್ಷದ ರಾಜ್ ಸುದ್ ಸ್ವತಂತ್ರ ಭಾರತದಲ್ಲಿ ನಡೆದ ಪ್ರತಿಯೊಂದು ಚುನಾವಣೆಯಲ್ಲೂ ಮತ ಚಲಾಯಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಕಳೆದ 76 ವರ್ಷಗಳಲ್ಲಿ ದೇಶ ವೈವಿಧ್ಯಮಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವದ ಮಹಾ ಪ್ರಯಾಣಕ್ಕೆ ಭಾರತದ ಚುನಾವಣೆಗಳು ಸಾಕ್ಷಿಯಾಗಿವೆ.
ಶುಕ್ರವಾರದಿಂದ ಪ್ರಾರಂಭವಾಗುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸಮರಾಭ್ಯಾಸ ಸುಮಾರು 6 ವಾರಗಳ ಕಾಲ ನಡೆಯಲಿದೆ. ವಿಶ್ವದ ಬೃಹತ್ ಚುನಾವಣೆಯಲ್ಲಿ ಸುಮಾರು 970 ಮಿಲಿಯನ್ ಅಂದರೆ 97 ಕೋಟಿ ಜನರು ತಮ್ಮ ಹಕ್ಕು ಚಲಾವಣೆ ಮಾಡಲು ಅರ್ಹತೆ ಪಡೆದುಕೊಂಡಿದ್ದಾರೆ. ಈ ಪ್ರಜಾಪ್ರಭುತ್ವದಲ್ಲಿ ಹಿರಿಯರು - ಕಿರಿಯರು ಎನ್ನದೇ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ನಡೆದ ಹೆಚ್ಚಿನ ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ, ಈ ಭವಿಷ್ಯ ನಿಜವೋ ಸುಳ್ಳೋ ಎಂಬುದನ್ನು ನಿರ್ಧರಿಸಲು ಏಪ್ರಿಲ್ 19 ರಿಂದ ಜೂನ್ ಒಂದರವರೆಗೂ ಮತದಾನ ನಡೆಯಲಿದ್ದು, ಅಂತಿಮವಾಗಿ ಜೂನ್ ನಾಲ್ಕರಂದು ಫಲಿತಾಂಶ ಹೊರ ಬೀಳಲಿದೆ.
ಪರ ವಿರೋಧ ಚರ್ಚೆ:ನನಗೆ ಮೋದಿ ಎಂದರೆ ತುಂಬಾ ಇಷ್ಟ. ಮೋದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ, ಇಡೀ ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲು ಬಯಸುತ್ತಿದ್ದಾರೆ ಎಂದು ಸುದ್ ಬಣ್ಣಿಸಿದ್ದಾರೆ. ಆದರೆ, ದೇಶದ ಅಲ್ಪಸಂಖ್ಯಾತರ ವಿರುದ್ಧ ಹಿಂದೂ ರಾಷ್ಟ್ರೀಯವಾದಿಗಳ ದಾಳಿಗಳು ಹೆಚ್ಚುತ್ತಿವೆ. ಭಿನ್ನಾಭಿಪ್ರಾಯ ಮತ್ತು ಮುಕ್ತ ಮಾಧ್ಯಮಗಳಿಗೆ ಅವಕಾಶಗಳು ಕ್ಷೀಣಿಸುತ್ತಿವೆ. ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರವಾಗಿ ಅದರ ಸ್ಥಾನಮಾನ ದುರ್ಬಲಗೊಳ್ಳುತ್ತಿದೆ ಎಂದು ವಿಮರ್ಶಕರು ಹಾಗೂ ಅನೇಕ ಬುದ್ದಿ ಜೀವಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷಗಳು ಮತದಾರರನ್ನು ವಿಭಜಿಸಲು ಪ್ರಯತ್ನಿಸುತ್ತಿವೆ ಎಂದು ಹಣಕಾಸು ಸಲಹೆಗಾರ ಧೀರೇನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುವಕರನ್ನು ಕಾಡುತ್ತಿದೆ ನಿರುದ್ಯೋಗ: ದೇಶದ 200 ಮಿಲಿಯನ್ ಯುವ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲು ಸನ್ನದ್ಧರಾಗಿದ್ದಾರೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರಕಾರ, ಮಾರ್ಚ್‌ನಲ್ಲಿ ನಿರುದ್ಯೋಗ ದರವು ಶೇ 7 ಕ್ಕಿಂತ ಹೆಚ್ಚಿದೆ. ಇದು ಯುವಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ’’ಸ್ಥಿರವಾದ ಉದ್ಯೋಗ ಹುಡುಕುವ ಅಗತ್ಯದ ಬಗ್ಗೆ ನನಗೆ ಬಹಳ ಅರಿವಿದೆ ಮತ್ತು ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸುವ ಮೊದಲು ನಾನು ಆ ಪ್ರದೇಶದಲ್ಲಿ ಪ್ರತಿ ಪಕ್ಷದ ಟ್ರ್ಯಾಕ್ ರೆಕಾರ್ಡ್‌ಗಳು ಮತ್ತು ಯೋಜನೆಗಳನ್ನು ನೋಡುತ್ತೇನೆ ಎಂದು 22 ವರ್ಷದ ಮಾನ್ಯ ಸಚ್‌ದೇವ್ ಹೇಳಿದ್ದಾರೆ.
ಮತ್ತೊಬ್ಬ ಯುವ ಮತದಾರೆ ಅಂಕಿತಾ ಜಸ್ರಾ ಮಾತನಾಡಿ, ವಿದೇಶಕ್ಕೆ ಹೋಗುವುದು ವಿದ್ಯಾರ್ಥಿಗಳಿಗೆ "ಹೆಚ್ಚು ಆಕರ್ಷಕವಾಗಿದೆ" ಮತ್ತು "ಭಾರತ ಹೊಂದಿರುವ ಕೌಶಲ್ಯ ಮತ್ತು ಎಲ್ಲಾ ಪ್ರತಿಭೆಗಳು ನಮ್ಮದಲ್ಲದ ದೇಶಗಳಿಗೆ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.