ನವದೆಹಲಿ: 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಸಹಿತ ಒಟ್ಟು 93 ಕ್ಷೇತ್ರಗಳಲ್ಲಿ ಮಂಗಳವಾರ ನಡೆದ ಮೂರನೇ ಹಂತದ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ. ರಾತ್ರಿ 11.45ರ ರವರೆಗಿನ ಭಾರತೀಯ ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ ಅಂದಾಜು ಶೇ 64.40ರಷ್ಟು ಮತದಾನವಾಗಿದೆ.
ಅಸ್ಸಾಂನಲ್ಲಿ (ಶೇ.81.61) ಅತಿ ಹೆಚ್ಚು ಮತದಾನವಾದರೆ, ಉತ್ತರ ಪ್ರದೇಶದಲ್ಲಿ (ಶೇ.57.34) ಅತಿ ಕಡಿಮೆ ಮತದಾನವಾಗಿದೆ. ಅಂತಿಮ ಫಲಿತಾಂಶವನ್ನು ಆಯೋಗ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.
ಎಲ್ಲಿ, ಎಷ್ಟು ಕ್ಷೇತ್ರಗಳಿಗೆ ಚುನಾವಣೆ?: ಅಸ್ಸಾಂ (4 ಸ್ಥಾನಗಳು), ಬಿಹಾರ (5), ಛತ್ತೀಸ್‌ಗಢ (7), ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು (02), ಗೋವಾ (02), ಗುಜರಾತ್ (25), ಕರ್ನಾಟಕ (14), ಮಧ್ಯ ಪ್ರದೇಶ (09), ಮಹಾರಾಷ್ಟ್ರ (11), ಉತ್ತರ ಪ್ರದೇಶ (10) ಮತ್ತು ಪಶ್ಚಿಮ ಬಂಗಾಳದ (04) ಸ್ಥಾನಗಳಿಗೆ ಮತದಾನ ನಡೆದಿದೆ.
ಕಣದಲ್ಲಿರುವ ಪ್ರಮುಖರು: ಕಣದಲ್ಲಿರುವ 1,331 ಅಭ್ಯರ್ಥಿಗಳ ಪೈಕಿ ಪ್ರಮುಖವಾಗಿ ಕರ್ನಾಟಕದಿಂದ ಜಗದೀಶ್ ಶೆಟ್ಟರ್, ಪ್ರಲ್ಹಾದ ಜೋಶಿ, ರಮೇಶ್ ಜಿಗಜಿಣಗಿ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ರಾಧಾಕೃಷ್ಣ, ಕೆ.ಎಸ್.ಈಶ್ವರಪ್ಪ, ಬಿ.ವೈ.ರಾಘವೇಂದ್ರ ರಾಜಕೀಯ ಭವಿಷ್ಯ ಕುತೂಹಲ ಕೆರಳಿಸಿದೆ.
ಅದರಂತೆ, ಸಚಿವ ಅಮಿತ್ ಶಾ, ಜ್ಯೋತಿರಾದಿತ್ಯ ಸಿಂಧಿಯಾ, ಶಿವರಾಜ್ ಸಿಂಗ್ ಚೌಹಾಣ್, ಡಾ.ಮನ್ಸುಖ್ ಮಾಂಡವಿಯಾ, ದಿಗ್ವಿಜಯ್ ಸಿಂಗ್, ಸುಪ್ರಿಯಾ ಸುಲೆ, ಅನಂತ್ ಗೀತೆ ಸೇರಿದಂತೆ ಹಲವು ಹಿರಿಯ ನಾಯಕರ ಭವಿಷ್ಯ ಮತಯಂತ್ರ ಸೇರಿದೆ.
ಯಾವ ರಾಜ್ಯದಲ್ಲಿ ಎಷ್ಟು ಮತದಾನ?: ಅಸ್ಸಾಂನಲ್ಲಿ (4 ಸ್ಥಾನಗಳು) ಶೇ. 81.61, ಪಶ್ಚಿಮ ಬಂಗಾಳದಲ್ಲಿ (4 ಸ್ಥಾನಗಳು) 75.79, ಗೋವಾದಲ್ಲಿ (2 ಸ್ಥಾನಗಳು) 75.20, ಛತ್ತೀಸ್‌ಗಢದಲ್ಲಿ (7 ಸ್ಥಾನಗಳು) 71.06, ಕರ್ನಾಟಕದಲ್ಲಿ (14 ಸ್ಥಾನಗಳು) 70.41, ದಾದ್ರಾ, ನಗರ್ ಹವೇಲಿ ಮತ್ತು ದಿಯು-ದಮನ್ನಲ್ಲಿ (2 ಸ್ಥಾನಗಳು) ಶೇ. 69.87, ಮಧ್ಯಪ್ರದೇಶದಲ್ಲಿ (9 ಸ್ಥಾನಗಳು) ಶೇ. 66.05, ಗುಜರಾತ್ನಲ್ಲಿ (25 ಸ್ಥಾನಗಳು) ಶೇ. 58.98, ಬಿಹಾರದಲ್ಲಿ (5 ಸ್ಥಾನಗಳು) ಶೇ. 58.18, ಉತ್ತರ ಪ್ರದೇಶದಿಂದ (10 ಸ್ಥಾನಗಳು) ಶೇ. 57.34 ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಾತ್ಕಾಲಿಕ ಮಾಹಿತಿ ನೀಡಿದೆ.
ಸುಮಾರು 121 ಮಹಿಳೆಯರು ಸೇರಿದಂತೆ 1,331 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗ್ಗೆ 7ರಿಂದ ಪ್ರಾರಂಭವಾದ ಮತದಾನ ಪ್ರಕ್ರಿಯೆ ಸಂಜೆ 6ರ ತನಕ ನಡೆದಿದೆ. ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಮತಗಟ್ಟೆ ಅಧಿಕಾರಿಗಳು ರಾಜಕೀಯ ಪಕ್ಷಗಳ ಬೂತ್ ಏಜೆಂಟರ ಸಮ್ಮುಖದಲ್ಲಿ ಮತಯಂತ್ರವನ್ನು ಸೀಲ್ ಮಾಡಿ ಸ್ಟ್ರಾಂಗ್ ರೂಂಗೆ ತೆಗೆದುಕೊಂಡು ಹೋಗಿದ್ದಾರೆ.
ಜೂನ್ 4ರಂದು ಪ್ರಜಾ ತೀರ್ಪು!: ಹಂತ 3ರ ಮುಕ್ತಾಯದೊಂದಿಗೆ, 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿರುವ ಅರ್ಧದಷ್ಟು ಲೋಕಸಭಾ ಸ್ಥಾನಗಳಲ್ಲಿ (283) ಮತದಾನ ಪೂರ್ಣವಾಗಿದೆ. ಒಟ್ಟು ಏಳು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟಗೊಳ್ಳುತ್ತದೆ.