ನವದೆಹಲಿ:18ನೇ ಲೋಕಸಭೆಯ ಮೊದಲ ಅಧಿವೇಶನವು, 1975ರಲ್ಲಿ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಕುರಿತ ವಾಗ್ವಾದಕ್ಕೆ ಕಾರಣವಾಯಿತು. ನೂತನ ಸ್ಪೀಕರ್ ಓಂ ಬಿರ್ಲಾ ಎಮರ್ಜೆನ್ಸಿಯನ್ನು ಖಂಡಿಸಿ 2 ನಿಮಿಷಗಳ ಮೌನಾಚಾರಣೆಗೆ ಸೂಚಿಸಿದರು. ಇದನ್ನು ಪ್ರತಿಪಕ್ಷಗಳು ವಿರೋಧಿಸಿದವು. ಪ್ರಧಾನಿ ನರೇಂದ್ರ ಮೋದಿ ಸ್ಪೀಕರ್ ನಿರ್ಧಾರವನ್ನು ಮೆಚ್ಚಿದರು.
ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಇಂದಿರಾ ಗಾಂಧಿ ಸರ್ಕಾರ ಸಂವಿಧಾನವನ್ನು ಹತ್ತಿಕ್ಕಿತ್ತು. ಇದನ್ನು ಸ್ಪೀಕರ್ ಓಂ ಬಿರ್ಲಾ ಖಂಡಿಸಿದ್ದು ಹರ್ಷ ತಂದಿದೆ. ಆ ವೇಳೆ ಸಂಕಷ್ಟಕ್ಕೆ ಸಿಲುಕಿದವರಿಗೆ ಗೌರವಾರ್ಥವಾಗಿ ಮೌನಾಚರಣೆ ಮಾಡಿದ್ದು, ಅದ್ಭುತ ಭಾವ ಮೂಡಿಸಿತು ಎಂದರು.
'ಸರ್ವಾಧಿಕಾರಕ್ಕೆ ಒಂದು ಉದಾಹರಣೆ'-ಮೋದಿ: ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿರುವ ಮೋದಿ, '1975ರಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯು ಸರ್ವಾಧಿಕಾರ ಹೇಗಿರುತ್ತದೆ ಎಂಬುದಕ್ಕೆ ಉದಾಹರಣೆ. ಪ್ರಜಾಪ್ರಭುತ್ವದ ಕತ್ತು ಹಿಸುಕಿದರು. ಇದನ್ನು ಸ್ಪೀಕರ್ ಖಂಡಿಸಿದ್ದು ಸಂತಸ ತಂದಿದೆ. 50 ವರ್ಷಗಳ ಹಿಂದೆ ಎಮರ್ಜೆನ್ಸಿ ಹೇರಿದ್ದರ ಬಗ್ಗೆ ಇಂದಿನ ಯುವಕರು ತಿಳಿದುಕೊಳ್ಳಬೇಕು. ಸಂವಿಧಾನವನ್ನು ತುಳಿದು, ಸಾರ್ವಜನಿಕ ಅಭಿಪ್ರಾಯವನ್ನು ಹತ್ತಿಕ್ಕಿ, ಸರ್ಕಾರಿ ಸಂಸ್ಥೆಗಳನ್ನು ನಾಶಪಡಿಸಿದರೆ ಏನಾಗುತ್ತದೆ ಎಂಬುದಕ್ಕೆ ಇದು ಉತ್ತಮ ನಿದರ್ಶನ' ಎಂದಿದ್ದಾರೆ.
ಸ್ಪೀಕರ್ ನಿರ್ಣಯಕ್ಕೆ ಪ್ರತಿಪಕ್ಷಗಳ ವಿರೋಧ:ನೂತನ ಸ್ಪೀಕರ್ ಆಗಿ ಓಂ ಬಿರ್ಲಾ ತುರ್ತು ಪರಿಸ್ಥಿತಿಯನ್ನು ಖಂಡಿಸಿದರು. ಆ ಅವಧಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸೂಚಿಸುವ ಸಲುವಾಗಿ ಸದನದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಲು ಸೂಚಿಸಿದರು. ಇದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿ ಗದ್ದಲ ಸೃಷ್ಟಿಸಿದವು. ಇದರ ನಡುವೆಯೂ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿದ್ದವರು ಮೌನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಸ್ಪೀಕರ್, "ಸದನವು 1975ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಬಲವಾಗಿ ಖಂಡಿಸುತ್ತದೆ. ಈ ತಪ್ಪು ನಿರ್ಧಾರವನ್ನು ವಿರೋಧಿಸಿ, ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೋರಾಡಿದವರ ಸಂಕಲ್ಪವನ್ನು ಪ್ರಶಂಸಿಸುತ್ತೇವೆ. 1975ರ ಜೂನ್ 25 ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯ" ಎಂದು ಬಣ್ಣಿಸಿದರು.
'ಸಂವಿಧಾನದ ಮೇಲೆ ದಾಳಿ': "ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ದಾಳಿ ಮಾಡಿದರು. ಭಾರತ ಪ್ರಜಾಪ್ರಭುತ್ವದ ತಾಯಿ. ಇಲ್ಲಿನ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಚರ್ಚೆಗಳಿಗೆ ದೊಡ್ಡ ಬೆಂಬಲವಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಇನ್ನೂ ಅಸ್ತಿತ್ವದಲ್ಲಿವೆ. ಇಂತಹ ದೇಶದಲ್ಲಿ ಸರ್ವಾಧಿಕಾರವನ್ನು ಹೇರಲಾಯಿತು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹತ್ತಿಕ್ಕಲಾಯಿತು" ಎಂದು ಟೀಕಿಸಿದರು.
ಇದನ್ನೂ ಓದಿ:18ನೇ ಲೋಕಸಭೆಯ ನೂತನ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ - Om Birla elected new Speaker