ಚೆನ್ನೈ: (ತಮಿಳುನಾಡು):ದ್ರಾವಿಡ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಲ್ಲಿ ಮತ್ತೆ ಹಿಂದಿ ಹೇರಿಕೆ ವಿವಾದ ಎದ್ದಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿ ಡಿಫಾಲ್ಟ್ ಭಾಷೆಯಾಗಿ ಬದಲಿಸಿದ್ದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಭಾರತೀಯ ಸಾರ್ವಜನಿಕ ವಲಯದ ವಿಮಾ ಕಂಪನಿ ಎಲ್‌ಐಸಿಯ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್ ಡಿಫಾಲ್ಟ್ ಭಾಷೆಯಾಗಿತ್ತು. ಮಂಗಳವಾರದಿಂದ ಅದು ಹಿಂದಿ ಭಾಷೆಗೆ ಬದಲಾಗಿದೆ. ಮುಖಪುಟವು ಹಿಂದಿಯಲ್ಲಿ ಪ್ರದರ್ಶನವಾಗುತ್ತಿದೆ. ಎಲ್ಐಸಿಯಲ್ಲೂ ಹಿಂದಿ ಹೇರಿಕೆ ಶುರುವಾಗಿದೆ ಎಂದು ಸಿಎಂ ಎಂ.ಕೆ.ಸ್ಟಾಲಿನ್, ವಿಪಕ್ಷ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ ಹಲವು ನಾಯಕರು ಟೀಕಿಸಿದ್ದಾರೆ.
LIC ವೆಬ್‌ಸೈಟ್‌ನಲ್ಲಿ ಆಗಿದ್ದೇನು?:ಜೀವ ವಿಮಾ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಹಿಂದಿ ಭಾಷೆಯನ್ನು ಡಿಫಾಲ್ಟ್ ಆಗಿ ನೀಡಲಾಗಿದೆ. ಇದರಿಂದ ಎಲ್ಲ ವಿವರಗಳು ಹಿಂದಿಯಲ್ಲೇ ಕಾಣುತ್ತಿವೆ. ಈ ಮೊದಲಿದ್ದ ಆಂಗ್ಲ ಭಾಷೆಯನ್ನು ಆಯ್ಕೆಯಾಗಿ ನೀಡಲಾಗಿದೆ. ಇಷ್ಟಲ್ಲದೇ, ಆಂಗ್ಲ ಭಾಷೆಯನ್ನು ಆಯ್ಕೆ ಮಾಡಿ ಎಂಬುದೂ ಹಿಂದಿಯಲ್ಲೇ ಇದೆ. ಇದು ಹಿಂದಿಯೇತರ ರಾಜ್ಯಗಳಲ್ಲಿ ಬಲವಂತವಾಗಿ ಭಾಷಾ ಹೇರಿಕೆ ಮಾಡಲಾಗುತ್ತಿದೆ ಎಂಬ ಕಿಡಿ ಹೊತ್ತಿಸಿದೆ.
ಸಿಎಂ ಸ್ಟಾಲಿನ್ ಗರಂ:ಈ ಬಗ್ಗೆ ಸಾಮಾಜಿ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಎಲ್‌ಐಸಿ ವೆಬ್‌ಸೈಟ್ ಅನ್ನು ಹಿಂದಿ ಹೇರಿಕೆಯ ಪ್ರಚಾರ ಸಾಧನವಾಗಿ ಮಾರ್ಪಡಿಸಲಾಗಿದೆ. ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡುವುದೂ ಹಿಂದಿಯಲ್ಲಿದೆ. ಇದು ಭಾರತದ ವೈವಿಧ್ಯತೆಯನ್ನು ತುಳಿದು ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.