ತಿರುವನಂತಪುರ/ಚೆನ್ನೈ:ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಒಂದು ದಿನದ ಬಳಿಕ ಅಂದರೆ ಗುರುವಾರ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ದಿಲ್ಲಿಯಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದವು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಲ್‌ಡಿಎಫ್, ಸಂಸದ ಟಿಆರ್.ಬಾಲು ಮುಂದಾಳತ್ವದಲ್ಲಿ ಡಿಎಂಕೆ ಸಂಸದರು ಜಂತರ್ಮಂತರ್ನಲ್ಲಿ ಹೋರಾಟ ನಡೆಸಿದವು.
ಈ ವೇಳೆ ಮಾತನಾಡಿದ ಸಿಎಂ ಪಿಣರಾಯಿ, ಭಾರತದ ಒಕ್ಕೂಟ ರಚನೆಯನ್ನು ಸಂರಕ್ಷಿಸಲು ನಾವೆಲ್ಲರೂ ಒಗ್ಗಟ್ಟಾಗಿ ಈ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಫೆಬ್ರವರಿ 8ನೇ ತಾರೀಖನ್ನು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕೆಂಪು ಅಕ್ಷರಗಳಲ್ಲಿ ಬರೆಯಬೇಕಿದೆ. ಕೇಂದ್ರ ರಾಜ್ಯ ಸಂಬಂಧಗಳ ಸಮತೋಲನಕ್ಕೆ ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ಕೇರಳ ಸಚಿವ ಕಾಡನ್ನಪಲ್ಲಿ ರಾಮಚಂದ್ರನ್ ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳು ಸಂವಿಧಾನದ ವಿರುದ್ಧವಾಗಿವೆ. ನಾವು ಒಕ್ಕೂಟ ಸಂಬಂಧನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಇದರ ವಿರುದ್ಧವಾಗಿದೆ ಎಂದು ಆರೋಪಿಸಿದರು.
ತಮಿಳುನಾಡು ಸರ್ಕಾರದ ಹೋರಾಟ;2024- 25ರ ಮಧ್ಯಂತರ ಬಜೆಟ್‌ನಲ್ಲಿ ತಮಿಳುನಾಡಿಗೆ ಅಗತ್ಯ ಹಣ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿರುವ ತಮಿಳುನಾಡಿ ಡಿಎಂಕೆ ನೇತೃತ್ವದ ಸರ್ಕಾರ ಕೇಂದ್ರದ ವಿರುದ್ಧ ಪ್ರತಿಭಟಿಸಿತು. ಡಿಎಂಕೆ ಸಂಸದ ಟಿ.ಆರ್.ಬಾಲು ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಬಳಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಬಳಿಕ ಮಾತನಾಡಿದ ಸಂಸದ, ತಮಿಳುನಾಡಿಗೆ ಪ್ರವಾಹ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಸರ್ಕಾರ ಇದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಜೊತೆಗೆ ಸದನವನ್ನು ಮುಂದೂಡಲು ಮನವಿ ಮಾಡಲಾಗಿತ್ತು. ಆದರೆ, ಲೋಕಸಭೆ ಸ್ಪೀಕರ್ ತಿರಸ್ಕರಿಸಿದರು. ಇದನ್ನು ವಿರೋಧಿಸಿ ತಮಿಳುನಾಡಿನ ಎಲ್ಲಾ ಪಕ್ಷಗಳು ಮತ್ತು ಕಾಂಗ್ರೆಸ್ ಸದನದಿಂದ ಹೊರನಡೆದವು ಎಂದು ತಿಳಿಸಿದರು.