ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವಾದ 'ಭಾರತ ರತ್ನ' ಘೋಷಿಸಲಾಗಿದೆ. ಮರಣೋತ್ತರವಾಗಿ ಈ ಪ್ರಶಸ್ತಿ ಪ್ರಕಟಿಸಲಾಗಿದ್ದು, ಈ ಬಗ್ಗೆ ರಾಷ್ಟ್ರಪತಿ ಭವನವು ಪ್ರಕಟಣೆ ನೀಡಿದೆ.
ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕರಾದ ಕರ್ಪೂರಿ ಠಾಕೂರ್ ಜನ ನಾಯಕ ಎಂದೇ ಹೆಸರು ಮಾಡಿದವರು. ನಾಳೆ, ಜನವರಿ 24ರಂದು ಜನ್ಮ ಶತಮಾನೋತ್ಸವ ಆಚರಿಸಲಾಗುತ್ತದೆ. ಇದಕ್ಕೂ ಮುನ್ನವಾದ ಇಂದು ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ (ಮರಣೋತ್ತರ) ಪ್ರಶಸ್ತಿ ನೀಡಲು ರಾಷ್ಟ್ರಪತಿಗಳು ಸಂತಸಗೊಂಡಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. ಮತ್ತೊಂದೆಡೆ, ಮಹಾನ್ ಜನನಾಯಕ ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಈ ಸಮಯದಲ್ಲಿ 'ಭಾರತ ರತ್ನ' ಪ್ರಶಸ್ತಿ ನೀಡಲು ಭಾರತ ಸರ್ಕಾರ ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕರ್ಪೂರಿ ಠಾಕೂರ್ ಅವರನ್ನು ಸಾಮಾಜಿಕ ನ್ಯಾಯದ ದಾರಿದೀಪ ಎಂದೂ ಬಣ್ಣಿಸಿರುವ ಪ್ರಧಾನಿ ಮೋದಿ, ಈ ಪ್ರತಿಷ್ಠಿತ ಗೌರವವು ವಂಚಿತರ ಪರವಾಗಿ ಮತ್ತು ಸಮಾನತೆ ಮತ್ತು ಸಬಲೀಕರಣದ ಧೀಮಂತರಾಗಿ ಅವರ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ದೀನದಲಿತರನ್ನು ಮೇಲಕ್ಕೆತ್ತಲು ಅವರ ಅಚಲ ಬದ್ಧತೆ ಮತ್ತು ದೂರದೃಷ್ಟಿಯ ನಾಯಕತ್ವವು ಭಾರತದ ಸಾಮಾಜಿಕ, ರಾಜಕೀಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ಈ ಪ್ರಶಸ್ತಿ ಅವರ ಗಮನಾರ್ಹ ಕೊಡುಗೆಗಳನ್ನು ಗೌರವಿಸುವುದು ಮಾತ್ರವಲ್ಲದೇ ನ್ಯಾಯಯುತ ಮತ್ತು ಸಮಾನ ಸಮಾಜವನ್ನು ನಿರ್ಮಿಸುವ ಅವರ ಧ್ಯೇಯವನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆ.