ಪಾಟ್ನಾ (ಬಿಹಾರ) :ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಯಾದವ್ ಅವರನ್ನು ಇಂದು ಇಡಿ ವಿಚಾರಣೆ ನಡೆಸಿತು. ತೇಜಸ್ವಿ ಯಾದವ್ ರಾಬ್ರಿ ನಿವಾಸದಿಂದ ಇಡಿ ಕಚೇರಿಗೆ ತೆರಳಿದಾಗ, ರಾಬ್ರಿ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಸೇರಿದ್ದರು. ಅವರು ಮನೆಯಿಂದ ಹೊರಬಂದಾಗ 'ತೇಜಸ್ವಿ ಯಾದವ್ ಜಿಂದಾಬಾದ್ 'ಎಂದು ಬೆಂಬಲಿಗರು ಘೋಷಣೆಗಳನ್ನು ಕೂಗಿ, ನಂತರ ಇಡಿ ಕಚೇರಿಗೆ ಕಳುಹಿಸಿಕೊಟ್ಟರು.
ಧರಣಿ ಕುಳಿತ ಆರ್‌ಜೆಡಿ ನಾಯಕರು : ಆರ್‌ಜೆಡಿ ಸಂಸದ ಮನೋಜ್ ಝಾ, ಮಿಸಾ ಭಾರತಿ ಸೇರಿದಂತೆ ಹಲವು ಮುಖಂಡರು ಇಡಿ ಕಚೇರಿಯ ಹೊರಗೆ ಧರಣಿ ಕುಳಿತಿದ್ದರು. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಿಸಾ ಭಾರತಿ ಮತ್ತು ತೇಜ್ ಪ್ರತಾಪ್ ಆಗಮನ: ಕಚೇರಿ ಒಳಗೆ ಇಡಿ ಅಧಿಕಾರಿಗಳು ತೇಜಸ್ವಿ ಯಾದವ್ ಅವರನ್ನು ವಿಚಾರಣೆ ನಡೆಸುತ್ತಿದ್ದರು. ಇತ್ತ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ಇಡಿ ಕಚೇರಿ ತಲುಪಿದ್ದರು. ಆದರೆ, ಸ್ವಲ್ಪ ಹೊತ್ತಿನ ನಂತರ ಅಳುತ್ತಾ ಅಲ್ಲಿಂದ ಹೊರಟು ಹೋಗಿದ್ದಾರೆ. ಇದಾದ ಬಳಿಕ ಅಕ್ಕ ಮಿಸಾ ಭಾರತಿ ಕೂಡ ಆಗಮಿಸಿದ್ದರು.
ನಾಲ್ಕು ಗಂಟೆಗಳ ಕಾಲ ತೇಜಸ್ವಿ ವಿಚಾರಣೆ :ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ವಿಚಾರಣೆಗೆ ಬೆಳಗ್ಗೆ 11.30ಕ್ಕೆ ಇಡಿ ಕಚೇರಿ ತಲುಪಿದ್ದರು. ಈ ವೇಳೆ, ಪಾಟ್ನಾ ಇಡಿ ಕಚೇರಿಯ ಹೊರಗೆ ಬೆಂಬಲಿಗರು ಮತ್ತು ಮುಖಂಡರು ನಿಂತಿದ್ದರು. ತೇಜಸ್ವಿ ಹೊರಬರುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಆರ್‌ಜೆಡಿ ಬೆಂಬಲಿಗರು ಪಟ್ಟುಹಿಡಿದಿದ್ದರು.
ಕೇಂದ್ರ ಸಚಿವ ನಿತ್ಯಾನಂದ ರೈ ಹೇಳಿದ್ದೇನು? : ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಇಡಿ ತನಿಖೆ ಕುರಿತು ಕೇಂದ್ರ ಸಚಿವ ನಿತ್ಯಾನಂದ ರೈ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ಲಾಲು ಪ್ರಸಾದ್ ಯಾದವ್ ಅವರನ್ನು ಇಡಿ ವಿಚಾರಣೆ ನಡೆಸಿದ್ದು, ಇಂದು ತೇಜಸ್ವಿ ಯಾದವ್ ಅವರನ್ನು ವಿಚಾರಣೆ ನಡೆಸುತ್ತಿದೆ. ಇಡಿ ಎಲ್ಲಿ ಹೋಗಿದೆ? ಭ್ರಷ್ಟಾಚಾರ ನಡೆದಿದ್ದರೆ ಇಡಿ ತನಿಖೆ ನಡೆಸುತ್ತದೆ. ಬಿಜೆಪಿ ವಿರುದ್ಧ ಮಾಡಿರುವ ಆರೋಪ ಸುಳ್ಳು. ಮೇವು ಹಗರಣ ಪ್ರಕರಣವನ್ನು ಸಿಬಿಐಗೆ ವಹಿಸಿದಾಗ ಅಧಿಕಾರದಲ್ಲಿದ್ದವರು ಯಾರು?. ಎಫ್‌ಐಆರ್ ದಾಖಲಾದಾಗ ಅಧಿಕಾರದಲ್ಲಿದ್ದವರು ಯಾರು?. ಆಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಹಾಗಾದರೆ ಬಿಜೆಪಿಯನ್ನು ಏಕೆ ದೂಷಿಸಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಲಾಲು ಕುಟುಂಬದ ಮೇಲೆ ಇಡಿ ತನಿಖೆ, ಸಾಮ್ರಾಟ್ ಪ್ರಶ್ನೆ: ಲಾಲು ಮತ್ತು ತೇಜಸ್ವಿ ಅವರನ್ನು ಇಡಿ ಪ್ರಶ್ನಿಸಿರುವ ಕುರಿತು ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಪ್ರತಿಕ್ರಿಯಿಸಿದ್ದು, 1997ರಲ್ಲಿ ಯಾರ ಸರ್ಕಾರವಿತ್ತು? ಲಾಲು ಪ್ರಸಾದ್ ಮುಖ್ಯಮಂತ್ರಿಯಾಗಿದ್ದಾಗ ಮೇವು ತಿಂದರು. ರೈಲ್ವೇ ಸಚಿವರಾದಾಗ ಮಕ್ಕಳ ಕೆಲಸವನ್ನೇ ತಿಂದರು. ಯಾರೇ ಹಗರಣ ಮಾಡಿದರೂ ಇಡಿ ವಿಚಾರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಇಡಿಯಿಂದ ತೇಜಸ್ವಿ ಯಾದವ್ ವಿಚಾರಣೆ :ಇಡಿ ಕಚೇರಿಯ ಹೊರಗೆ ಬೆಂಬಲಿಗರ ದೊಡ್ಡ ಗುಂಪು ಕೂಡ ಕಂಡುಬಂದಿತ್ತು. ಜನಸಂದಣಿಯಿಂದಾಗಿ ತೇಜಸ್ವಿ ಅವರೇ ತಮ್ಮ ಕಾರಿನಿಂದ ಹೊರಬಂದು ಜನರನ್ನು ದೂರ ಹೋಗುವಂತೆ ಕೇಳಬೇಕಾಯಿತು. ನಂತರ ತೇಜಸ್ವಿ ಅವರು ಇಡಿ ಕಚೇರಿಯೊಳಗೆ ಹೋಗಿದ್ದಾರೆ.
ಜಮಾಯಿಸಿದ ಬೆಂಬಲಿಗರ ಗುಂಪು: ಈ ವೇಳೆ ತೇಜಸ್ವಿ ಯಾದವ್ ಪರವಾಗಿ ಬೆಂಬಲಿಗರು ಘೋಷಣೆಗಳನ್ನು ಕೂಗಿದರು. 'ತೇಜಸ್ವಿ ಯಾದವ್, ಗಾಬರಿಯಾಗಬೇಡಿ. ಜಗತ್ತು ನಿಮ್ಮೊಂದಿಗಿದೆ' ಎಂಬ ಘೋಷಣೆಗಳೊಂದಿಗೆ ಪ್ರತಿಧ್ವನಿಸಿತು. ಸೋಮವಾರ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿದಾಗ ಕಚೇರಿಯ ಹೊರಗೆ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಜಮಾಯಿಸಿದ್ದರು.
ಇದನ್ನೂ ಓದಿ :ವಿವಿಧ ಪ್ರಕರಣ: ಭೂಪೇಂದ್ರ ಹೂಡಾ, ಲಾಲೂ ಪ್ರಸಾದ್ ವಿಚಾರಣೆ.. ಸೊರೇನ್ ಮನೆಗೆ ಇಡಿ, ದೆಹಲಿಗೆ ಸಿಎಂ ಹೇಮಂತ್