ಹೈದರಾಬಾದ್: ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ಅವರು ಇಂದು ತೆಲಂಗಾಣ ವಿಧಾನಸಭೆಗೆ ಆಟೋರಿಕ್ಷಾ ಚಲಾಯಿಸಿಕೊಂಡು ಬಂದು ಗಮನ ಸೆಳೆದಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೊಳಿಸಿದ್ದರಿಂದ ಆಟೋರಿಕ್ಷಾ ಚಾಲಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ರಾಮರಾವ್ ಈ ವಿನೂತನ ಮಾರ್ಗ ಅನುಸರಿಸಿದ್ದಾರೆ.
ರಿಕ್ಷಾ ಚಾಲಕರೊಂದಿಗೆ ಒಗ್ಗಟ್ಟು ಪ್ರದರ್ಶನ:ಬಿಆರ್ಎಸ್ನ ಇತರ ಶಾಸಕರು ಮತ್ತು ಎಂಎಲ್ಸಿಗಳು ಕೂಡ ಖಾಕಿ ಶರ್ಟ್ ಧರಿಸಿ ತ್ರಿಚಕ್ರ ಆಟೋರಿಕ್ಷಾಗಳಲ್ಲಿ ವಿಧಾನ ಸಭೆಗೆ ಆಗಮಿಸಿ ಆಟೋ ರಿಕ್ಷಾ ಚಾಲಕರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದರು. ಈ ಎಲ್ಲ ಶಾಸಕರು ಶಾಸಕರ ವಸತಿಗೃಹದಿಂದ ರ‍್ಯಾಲಿ ಮೂಲಕ ವಿಧಾನಸಭೆಗೆ ಬಂದರು. ದಾರಿಯುದ್ದಕ್ಕೂ ಆಟೋ ರಿಕ್ಷಾ ಚಾಲಕರ ಪರವಾಗಿ ಘೋಷಣೆಗಳನ್ನು ಮೊಳಗಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಆಟೋರಿಕ್ಷಾ ಚಾಲಕರಿಗೆ ನೀಡಿದ ಭರವಸೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮರಾವ್, "ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷವು, ರಾಜ್ಯದಲ್ಲಿರುವ 8 ಲಕ್ಷ ಆಟೋ ಚಾಲಕರಿಗೆ ಹಲವಾರು ಭರವಸೆಗಳನ್ನು ನೀಡಿತ್ತು. ಆದರೆ ಆ ಯಾವುದೇ ಭರವಸೆಗಳನ್ನು ಅದು ಈವರೆಗೂ ಈಡೇರಿಸಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ 93 ಆಟೋ ಚಾಲಕರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಸರ್ಕಾರವೇ ನೇರ ಕಾರಣ" ಎಂದು ಹೇಳಿದರು.