ನವದೆಹಲಿ:ಭಾರತದಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು 'ಒಂದು ರಾಷ್ಟ್ರ, ಒಂದು ಚುನಾವಣೆ' ಪರಿಕಲ್ಪನೆಯನ್ನು ಶಿಫಾರಸು ಮಾಡಿದೆ.
ಸಮಿತಿ ಕೇಂದ್ರ ಸರ್ಕಾರಕ್ಕೆ ಈ ಶಿಫಾರಸು ಮಾಡುವ ಮೊದಲು ವಿಶ್ವದ ಏಳು ದೇಶಗಳ ಚುನಾವಣಾ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದೆ ಎಂಬುದು ವಿಶೇಷ. ಮಾಜಿ ರಾಷ್ಟ್ರಪತಿಗಳ ಮುಂದಾಳತ್ವದ ಉನ್ನತ ಮಟ್ಟದ ಸಮಿತಿಯು ದಕ್ಷಿಣ ಆಫ್ರಿಕಾ, ಸ್ವೀಡನ್, ಬೆಲ್ಜಿಯಂ, ಜರ್ಮನಿ, ಜಪಾನ್, ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್‌ಗಳಲ್ಲಿನ ಚುನಾವಣೆಗಳ ಪ್ರಕ್ರಿಯೆಯನ್ನು ಪರಿಶೀಲಿಸಿದೆ.
ಈ ರಾಷ್ಟ್ರಗಳಲ್ಲಿ ಚುನಾವಣೆ ಹೇಗಿದೆ?: ದಕ್ಷಿಣ ಆಫ್ರಿಕಾದಲ್ಲಿ ಮೇ 29ರಂದು ಸಾರ್ವತ್ರಿಕ ಚುನಾವಣೆ ನಡೆಯುತ್ತದೆ. ಮತದಾರರು ರಾಷ್ಟ್ರೀಯ ಅಸೆಂಬ್ಲಿ (ಲೋಕಸಭೆ) ಮತ್ತು ಪ್ರಾಂತೀಯ ಶಾಸಕಾಂಗಗಳಿಗೆ(ವಿಧಾನಸಭೆಗಳು) ಏಕಕಾಲದಲ್ಲಿ ಮತ ಚಲಾಯಿಸುತ್ತಾರೆ. ಬಳಿಕ ಸ್ಥಳೀಯ ಸಂಸ್ಥೆಗಳಿಗೆ ಅವುಗಳ ಅವಧಿ ಅನುಸರಿಸಿ ಚುನಾವಣೆ ನಡೆಯುತ್ತದೆ.
ಸ್ವೀಡನ್ನಲ್ಲಿಸ್ಥಳೀಯ ಸಂಸ್ಥೆಗಳಿಂದ ಹಿಡಿದು ರಾಷ್ಟ್ರೀಯ ಚುನಾವಣೆಗಳು ಏಕಕಾಲದಲ್ಲಿ ನಡೆಯುತ್ತವೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಸಂಸತ್, ರಾಜ್ಯಗಳ ಚುನಾವಣೆಯು ಸೆಪ್ಟೆಂಬರ್ ತಿಂಗಳ ಎರಡನೇ ಭಾನುವಾರದಂದು ನಡೆಯುತ್ತವೆ. ಅದೇ ರೀತಿ, ಸ್ಥಳೀಯ ಸಂಸ್ಥೆಗಳಿಗೆ ಐದು ವರ್ಷಗಳಿಗೊಮ್ಮೆ ಸೆಪ್ಟೆಂಬರ್ ತಿಂಗಳ ಎರಡನೇ ಭಾನುವಾರದಂದು ಮತದಾನ ನಡೆಯುತ್ತವೆ.
ಸಮಿತಿಯ ಸದಸ್ಯರಾದ ಸುಭಾಷ್ ಸಿ.ಕಶ್ಯಪ್ ಅವರು ದೇಶದ ನಾಯಕನ ನೇಮಕ ಮತ್ತು ಅವಿಶ್ವಾಸ ಮತದ ವಿಶಿಷ್ಟ ರಚನೆಯನ್ನು ಹೊಂದಿರುವ ಜರ್ಮನ್ ಮಾದರಿಯನ್ನು ಭಾರತದಲ್ಲಿ ಅನುಷ್ಠಾನಕ್ಕೆ ತರಲು ಸಲಹೆ ನೀಡಿದ್ದಾರೆ.