ಕೋಲ್ಕತ್ತಾ (ಪಶ್ಚಿಮಬಂಗಾಳ):ಬಂಗಾಳದ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣ ಇಡೀ ದೇಶಾದ್ಯಂತ ಸಂಚಲನ ಉಂಟು ಮಾಡಿದೆ. ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದಾನೆ. ಆತ ಜೈಲು ಅಧಿಕಾರಿಗಳೊಂದಿಗೆ ಅಲ್ಲಿನ ವ್ಯವಸ್ಥೆಯ ಬಗ್ಗೆ ಚಕಾರ ಎತ್ತುತ್ತಿದ್ದಾನೆ. ತನಗೆ ರಾಜಮರ್ಯಾದೆ ನೀಡಬೇಕು ಎಂದೆಲ್ಲಾ ಆಗ್ರಹಿಸುತ್ತಿರುವುದಾಗಿ ತಿಳಿದುಬಂದಿದೆ.
ಇಲ್ಲಿನ ಪ್ರೆಸಿಡೆನ್ಸಿ ಕರೆಕ್ಷನಲ್ ಹೋಮ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸಂಜಯ್ ರಾಯ್ ಜೈಲು ಅಧಿಕಾರಿಗಳಿಗೆ ಕೀಟಲೆ ನೀಡುತ್ತಿದ್ದಾನೆ. ತನಗೆ ಉಳಿದ ಕೈದಿಗಳಿಗೆ ನೀಡುವ ಆಹಾರವನ್ನು ನೀಡುವಂತಿಲ್ಲ. ಎಗ್ ರೈಸ್, ನೂಡಲ್ಸ್ ಬೇಕು ಎಂದು ಕೋರಿದ್ದಾನೆ. ಆದರೆ, ಆತನಿಗೆ ಜೈಲು ನಿಯಮದಂತೆ ಆಹಾರ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳಿಗೇ ಆರೋಪಿ ಆವಾಜ್:ಜೈಲು ಸೇರಿದ ಬಳಿಕ ಸಂಜಯ್ ರಾಯ್ ವರ್ತನೆ ಬದಲಾಗಿದೆ. ತನ್ನನ್ನು ಪ್ರಕರಣದಲ್ಲಿ ಬೇಕೆಂತಲೇ ಸಿಕ್ಕಿ ಹಾಕಿಸಲಾಗಿದೆ. ತಾನು ನಿರಾಪರಾಧಿ ಎಂದು ಹಲಬುತ್ತಿದ್ದಾನಂತೆ. ಊಟದ ವಿಚಾರಕ್ಕೂ ಆತ ವರಾತ ತೆಗೆಯುತ್ತಿದ್ದಾನೆ. ಜೈಲು ಅಧಿಕಾರಿಗಳಿಗೇ ಆವಾಜ್ ಹಾಕಿದ್ದಾನಂತೆ. ಜೈಲು ಸಿಬ್ಬಂದಿ ವಾರ್ನಿಂಗ್ ನೀಡಿದ ಬಳಿಕ ಮೆತ್ತಗಾಗಿದ್ದಾನೆ. ಕ್ರಮೇಣ ಜೈಲಿನಲ್ಲಿ ನೀಡುವ ಆಹಾರಕ್ಕೆ ಒಗ್ಗಿಕೊಂಡಿದ್ದಾನೆ. ಮೊದಮೊದಲು, ಹಗಲಿನಲ್ಲಿ ನಿದ್ರೆ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದಾನೆ. ಆದರೆ, ನಿಯಮಗಳಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ಅಧಿಕಾರಿಗಳು ಗದರಿದ್ದಾರಂತೆ.