ಕರ್ನೂಲ್, ಆಂಧ್ರಪ್ರದೇಶ: ಅಲ್ಲಿ ಒಂದು ಕಿಲೋ ಈರುಳ್ಳಿ ಕೇವಲ 15 ರೂ. ಆದರೆ ರಾಜ್ಯ, ದೇಶಾದ್ಯಂತ ಕೆಜಿ ಈರುಳ್ಳಿಗೆ 60 ರೂ.ಇದೆ. ಅದೇನಪ್ಪಾ ಇಲ್ಲಿ ಕೇವಲ ರೂ.15 ಕೊಡುತ್ತಿದ್ದಾರೆ ಎಂದು ಆಶ್ಚರ್ಯ ಪಡುತ್ತೀರಾ? ಈ ದರ ಪಕ್ಕದ ರಾಜ್ಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ನೀವು ಹೇಗೆ ಹೇಳುತ್ತೀರಿ ಇಷ್ಟೊಂದು ಕಡುಮೆ ಬೆಲೆ ಇದೆ ಎಂದು?. ಕರ್ನೂಲು ಕೃಷಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಈರುಳ್ಳಿಗೆ 1000 ರಿಂದ 1500 ರೂ. ಅಂದರೆ ಕೆಜಿಗೆ 15 ರೂ.ಗೆ ಖರೀದಿ ಆಗುತ್ತಿದೆ. ಈಗ ಇದು ಅಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕರ್ನೂಲ್ ಜಿಲ್ಲೆಯ ಈರುಳ್ಳಿ ಬೆಳೆಗಾರರು ಇದರಿಂದಾಗಿ ಕಂಗಾಲಾಗಿದ್ದಾರೆ. ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗದೆ ಕೈ ಕೈ ಹಿಚುಕಿಕೊಳ್ಳುತ್ತಿದ್ದಾರೆ.
ಈರುಳ್ಳಿ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಬೇಗ ಕೊಳೆಯುತ್ತೆ: ಈರುಳ್ಳಿ ಸಾಮಾನ್ಯವಾಗಿ ಬೇಗ ಕೊಳೆಯುತ್ತದೆ. ಅದಕ್ಕಾಗಿಯೇ ಕಾಲಕಾಲಕ್ಕೆ ಗ್ರೇಡಿಂಗ್ ಮಾಡಬೇಕಾಗುತ್ತದೆ. ಆಗ ಮಾತ್ರ ವರ್ತಕರು ಖರೀದಿಗೆ ಮುಂದೆ ಬರುತ್ತಾರೆ. ಈ ರೀತಿ ಗ್ರೇಡಿಂಗ್ ಮಾಡಲು ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ. ನಿತ್ಯ ಈರುಳ್ಳಿ ವ್ಯಾಪಾರ ನಡೆಯದ ಕಾರಣ ಸವಕಳಿ ಹೆಸರಿನಲ್ಲಿ 5 ರಿಂದ 10 ಕ್ವಿಂಟಾಲ್ ಮಾಲನ್ನು ಬಿಸಾಡಬೇಕಾಗಿದೆ ಎಂದು ಈರುಳ್ಳಿ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ರಾಶಿ ರಾಶಿ ಈರುಳ್ಳಿ : ಕರ್ನೂಲು ಕೃಷಿ ಮಾರುಕಟ್ಟೆಯಲ್ಲಿ ಅನಿಯಮಿತ ಖರೀದಿಯಿಂದಾಗಿ ಈರುಳ್ಳಿ ಚೀಲಗಳು ರಾಶಿ ರಾಶಿಯಾಗಿ ಬಿದ್ದಿವೆ. ಕರ್ನೂಲ್‌ನಿಂದ ಕೋಲ್ಕತ್ತಾ, ಕೇರಳ, ಕಟಕ್, ತಮಿಳುನಾಡು, ಗುಜರಾತ್ ಮತ್ತು ಇತರ ಸ್ಥಳಗಳಿಗೆ ಈರುಳ್ಳಿ ರಫ್ತು ಮಾಡಲಾಗುತ್ತದೆ. ಆದರೆ, ವ್ಯಾಪಾರಸ್ಥರು ಖರೀದಿಸಿದ ಮಾಲನ್ನು ಮಾರುಕಟ್ಟೆಯಿಂದ ಹೊರಗೆ ತರಲು ತಡವಾಗುತ್ತಿದೆ. ಲಾರಿ ಸಿಗದ ಕಾರಣ ಲೋಡಿಂಗ್ ಕೂಡ ಸಮಸ್ಯೆಯಾಗುತ್ತದೆ. ಸುಮಾರು ಆರು ಸಾವಿರ ಟನ್ ಸರಕು ಇಲ್ಲಿನ ಮಾರುಕಟ್ಟೆಯಲ್ಲಿ ಸಂಗ್ರಹವಾಗಿದೆ.
ದಲ್ಲಾಳಿಗಳ ಕಿರುಕುಳ:ಕರ್ನೂಲು ಈರುಳ್ಳಿ ಮಾರುಕಟ್ಟೆಯಲ್ಲಿ ಖರೀದಿ ಸಮಸ್ಯೆ ಒಂದೆಡೆಯಾದರೆ, ದಲ್ಲಾಳಿಗಳ ಸಮಸ್ಯೆ ಮತ್ತೊಂದೆಡೆ ಹೆಚ್ಚಾಗುತ್ತಿದೆ. ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಈರುಳ್ಳಿ ಖರೀದಿಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ದಲ್ಲಾಳಿಗಳು ಮಾರುಕಟ್ಟೆಗೆ ಬರದಂತೆ ತಡೆಯಬೇಕಾದ ಅಧಿಕಾರಿಗಳು ಈ ಬ್ಗಗೆ ಮಾತ್ರ ತುಟಿ ಬಿಚ್ಚುತ್ತಿಲ್ಲ ಎನ್ನುತ್ತಿದ್ದಾರೆ ರೈತರು, ಬೆಳೆಗಾರರು.