ಕರ್ನಾಟಕ

karnataka

ಸಂಜೆ 5 ಗಂಟೆಗೆ ದೂರು, ರಾತ್ರಿ 10 ಗಂಟೆಗೆ ಆರೋಪಿಗಳು ಅರೆಸ್ಟ್​: ಪೊಲೀಸರಿಂದ ಶರವೇಗದ ತನಿಖೆ! - Kidnapping case

By ETV Bharat Karnataka Team

Published : Jul 13, 2024, 5:21 PM IST

ತೆಲಂಗಾಣದಲ್ಲಿ ಸಾಫ್ಟ್​ವೇರ್​ ಕಂಪನಿಯ ಸಿಇಒ ಅನ್ನು ಸಿಬ್ಬಂದಿಯೇ ಅಪಹರಿಸಿದ್ದರು. ದೂರು ದಾಖಲಾದ ಐದೇ ಗಂಟೆಯಲ್ಲಿ ಅವರನ್ನು ಪತ್ತೆ ಮಾಡಿ ಆರೋಪಿಗಳನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ತೆಲಂಗಾಣ ಅಪಹರಣ ಸುದ್ದಿ
ತೆಲಂಗಾಣ ಅಪಹರಣ ಸುದ್ದಿ (ETV Bharat)

ಹೈದರಾಬಾದ್ :ಸಂಬಳದ ವಿಚಾರವಾಗಿ ಸಿಬ್ಬಂದಿಯಿಂದ ಅಪಹರಣಕ್ಕೆ ಒಳಗಾಗಿದ್ದ ಸಾಫ್ಟ್​​​ವೇರ್​ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು(ಸಿಇಒ) ನಗರದ ಜುಬಿಲಿಹಿಲ್ಸ್​ ಪೊಲೀಸರು ದೂರು ಸ್ವೀಕರಿಸಿದ 5 ಗಂಟೆಯ ಒಳಗೆ ಪತ್ತೆ ಮಾಡಿ, ಆರೋಪಿಗಳನ್ನು ಬಂಧಿಸಿದ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.

ವಾಕಾಟಿ ರವಿಚಂದ್ರ ರೆಡ್ಡಿ ಕಿಡ್ನ್ಯಾಪ್​ ಆದ ಸಿಇಒ. ಇವರು ರಾಯದುರ್ಗದ ಟಿ-ಹಬ್ ಬಳಿಯ ಆರ್ಬಿಟ್‌ಮಾಲ್‌ನಲ್ಲಿ 'ಗಿಗ್ಲೈಜ್' ಎಂಬ ಸಾಫ್ಟ್‌ವೇರ್ ಕಂಪನಿಯನ್ನು ಪ್ರಾರಂಭಿಸಿದ್ದರು. ಆದರೆ, ಕೆಲ ತಿಂಗಳಿನಿಂದ ನೌಕರರಿಗೆ ಸಂಬಳ ನೀಡಿಲ್ಲ ಎಂಬ ದೂರು ಬಂದಿದೆ. ಇದರಿಂದ ರವಿಚಂದ್ರ ಅವರನ್ನು ಸಿಬ್ಬಂದಿಯೇ ಕಿಡ್ನ್ಯಾಪ್​​ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಪ್ರಕರಣ ವಿವರ:ಸಿಇಒ ರವಿಚಂದ್ರ ಅವರು, ಗಿಗ್ಲೈಜ್​ ಕಂಪನಿಯನ್ನು ಕಳೆದ ನವೆಂಬರ್​ನಲ್ಲಿ ಆರಂಭಿಸಿದ್ದರು. ಮೊದಮೊದಲು ಉತ್ತಮವಾಗಿದ್ದ ಕಂಪನಿ, ಬಳಿಕ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಇದರಿಂದ ಅಲ್ಲಿನ ನೌಕರರಿಗೆ ಸಂಬಳ ನೀಡುವಲ್ಲಿ ವಿಳಂಬವಾಗಿದೆ. ಕಂಪನಿಯ 1,500 ಉದ್ಯೋಗಿಗಳಿಗೆ ಸಲಹಾ ಸಂಸ್ಥೆಗಳ ಮೂಲಕ ತರಬೇತಿ ಕೊಡಿಸಿದ್ದರು. ಬಳಿಕ ಹಂತ ಹಂತವಾಗಿ ಅವರನ್ನು ನೇಮಿಸಿಕೊಳ್ಳಲಾಗಿತ್ತು. ಜನವರಿಯಿಂದ ಯಾರಿಗೂ ವೇತನ ನೀಡಿಲ್ಲ.

ಇದರಿಂದ ರೋಸಿಹೋಗಿದ್ದ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ವೇಳೆ ಜುಲೈ 9 ರಂದು ಮಧ್ಯರಾತ್ರಿ 2 ಗಂಟೆಗೆ ಎಂಟು ನೌಕರರು ರವಿಚಂದ್ರ ರೆಡ್ಡಿ ಮನೆಗೆ ಹೋಗಿದ್ದಾರೆ. ಆತನ ಜೊತೆ ಮಾತುಕತೆ ನಡೆಸಿ, ಬಳಿಕ ರವಿಚಂದ್ರ ರೆಡ್ಡಿ ಹಾಗೂ ಆತನ ಸ್ನೇಹಿತ ಮೋಹನ್ ಎಂಬಾತನನ್ನು ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದಾರೆ.

ಕರ್ನೂಲ್ ಜಿಲ್ಲೆಯ ಓಂಗೂರಿನ ಹೋಟೆಲ್‌ಗೆ ಕರೆದೊಯ್ದು ಒತ್ತೆಯಾಳಾಗಿಸಿಕೊಂಡಿದ್ದರು. ಈ ವೇಳೆ ಮೋಹನ್ ಎಂಬಾತ ಮೂತ್ರ ವಿಸರ್ಜನೆಯ ನೆಪದಲ್ಲಿ ಕಾರಿನಿಂದ ಇಳಿದು ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಇತ್ತ ರವಿಚಂದ್ರ ಅವರ ಪೋಷಕರು ಪುತ್ರ ನಾಪತ್ತೆಯಾಗಿದ್ದಾನೆ ಎಂದು ಅದೇ ದಿನ ಸಂಜೆ 5 ಗಂಟೆಗೆ ಜುಬಿಲಿಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಶೀಘ್ರವೇ ತನಿಖೆ ಆರಂಭಿಸಿದ ಪೊಲೀಸರು, ಆರೋಪಿಗಳು ಇರುವ ಜಾಗವನ್ನು ಪತ್ತೆ ಮಾಡಿದ್ದಾರೆ.

ರಾತ್ರಿ 10 ಗಂಟೆ ಸುಮಾರಿಗೆ ಎಲ್ಲ ಆರೋಪಿಗಳನ್ನು ಓಂಗೂರಿನ ಹೋಟೆಲ್‌ನಲ್ಲಿ ಬಂಧಿಸಿ, ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆರೋಪಿಗಳಿಂದ 82 ಲ್ಯಾಪ್‌ಟಾಪ್‌ಗಳು, ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ತನ್ನನ್ನು ಅಪಹರಿಸಿ, ಹಲ್ಲೆ ಮಾಡಿದ್ದಾರೆ ಎಂದು ಸಿಇಒ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್​ ಠಾಣೆ ಮುಂದೆ ಉದ್ಯೋಗಿಗಳು:ವಿಷಯ ತಿಳಿದ ಕಂಪನಿಯ ಇತರ ಉದ್ಯೋಗಿಗಳು ಮರುದಿನ ಪೊಲೀಸ್ ಠಾಣೆಗೆ ಆಗಮಿಸಿ ಗದ್ದಲ ಎಬ್ಬಿಸಿದ್ದಾರೆ. ತಮಗೆ ಕೆಲಸ ನೀಡುವ ನೆಪದಲ್ಲಿ 15 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ. ತಿಂಗಳ ಸಂಬಳವನ್ನೂ ನೀಡಿಲ್ಲ ಎಂದು ಸಿಒಇ ವಿರುದ್ಧ ಆರೋಪ ಮಾಡಿದ್ದಾರೆ. ರವಿಚಂದ್ರ ರೆಡ್ಡಿ ಇತ್ತೀಚೆಗೆ ವಿಜಯವಾಡದಿಂದ ಲಿಬರೇಶನ್ ಕಾಂಗ್ರೆಸ್ ಪಕ್ಷದ ಪರವಾಗಿ ಸಂಸತ್​ ಚುನಾವಣೆಗೆ ಸ್ಪರ್ಧಿಸಿ, ಬಳಿಕ ನಾಮಪತ್ರ ಹಿಂಪಡೆದಿದ್ದರು. ಅವರ ಸಹೋದರಿ ಚಾಂದಿನಿ ರೆಡ್ಡಿ ಇದೇ ಪಕ್ಷದಿಂದ ನಂದ್ಯಾಲದಲ್ಲಿ ಸ್ಪರ್ಧಿಸಿದ್ದರು.

ಕಂಪನಿಯ ನೌಕರರಿಂದ ವಸೂಲಿ ಮಾಡಿದ 15 ಕೋಟಿ ಹಣದಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಜುಬಿಲಿ ಹಿಲ್ಸ್ ಪೊಲೀಸರು ಸೂಚಿಸಿದ್ದಾರೆ. ಅಪಹರಣ ಆರೋಪ ಹೊತ್ತಿರುವ ನೌಕರರು, ಸಂಬಳ ನೀಡದ ಕಾರಣ ಮಾತುಕತೆಗೆ ಅವರನ್ನು ಕರೆದೊಯ್ಯಲಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಏಕಕಾಲದಲ್ಲಿ ನಾಲ್ಕು ಸರ್ಕಾರಿ ಉದ್ಯೋಗ: ಕಷ್ಟದಲ್ಲೂ ಅರಿಳಿದ ಪ್ರತಿಭೆ ಸಾಯಿಶಿಲ್ಪಿ - Inspiring Journey for youth

ABOUT THE AUTHOR

...view details