ಕರ್ನಾಲ್ (ಹರಿಯಾಣ): ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಮೂವರು ಅಪಹರಣ ಮಾಡಿರುವ ಪ್ರಕರಣ ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಬ್ಬರು ಯುವತಿಯರು ಮತ್ತು ಯುವಕನೊಬ್ಬ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮತ್ತೊಂದು ಕಾರಿನಿಂದ ಡಿಕ್ಕಿ ಹೊಡೆದು, ಮೂವರನ್ನೂ ಕಿಡ್ನಾಪ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕರ್ನಾಲ್‌ನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸೌರವ್ ರಾಣಾ ಎಂಬ ಯುವಕ ಮತ್ತು ಇಬ್ಬರು ಯುವತಿಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಇನ್ನೊಂದು ಕಾರು ಇದ್ದಕ್ಕಿದ್ದಂತೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಸೌರವ್ ರಾಣಾ ಸಂಚರಿಸುತ್ತಿದ್ದ ಕಾರು ರಸ್ತೆ ಬಿಟ್ಟು ಡಿವೈಡರ್ ಮೇಲೇರಿದೆ. ಇದಾದ ಬಳಿಕ ಕಾರಿನಿಂದ ಐವರು ದುಷ್ಕರ್ಮಿಗಳು ಕೆಳಗಿಳಿದು ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ, ಸೌರವ್ ರಾಣಾ ಮತ್ತು ಇಬ್ಬರು ಯುವತಿಯರಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಬಳಿಕ ಇಬ್ಬರು ಯುವತಿಯರು ಹಾಗೂ ಯುವಕನನ್ನು ಬಲವಂತವಾಗಿ ಹೊರತೆಗೆದು ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಈ ವೇಳೆ, ಕಾರಿನ ಬಳಿ ಚಪ್ಪಲಿ, ಒಡೆದ ಗಾಜುಗಳು ಪತ್ತೆಯಾಗಿವೆ.