ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಭಯೋತ್ಪಾದನೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ರಿಯಾಜ್ ಅಹ್ಮದ್ ಬಂಧಿತನಾಗಿದ್ದು, ಈತ ಮಾಜಿ ಯೋಧ. 2023ರ ಜನವರಿಯಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಜನವರಿ 27ರಂದು ಕುಪ್ವಾರ ಜಿಲ್ಲೆಯಲ್ಲಿ ಭಯೋತ್ಪಾದನಾ ಘಟಕವೊಂದನ್ನು ಭೇದಿಸಲಾಗಿತ್ತು. ಈ ವೇಳೆ, ಐವರನ್ನು ಬಂಧಿಸಿ, ತಲಾ ಐದು ಎಕೆ ರೈಫೆಲ್ಸ್ಗಳು, ಮ್ಯಾಗಜೀನ್ಗಳು, 15 ಗುಂಡುಗಳು ವಿವಿಧ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು. ಇವುಗಳನ್ನು ಪಾಕಿಸ್ತಾನದ ಎಲ್ಇಟಿ ಉಗ್ರ ಸಂಘಟನೆಯು ರವಾನಿಸಿತ್ತು. ಈ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಮಂಜೂರ್ ಅಹ್ಮದ್ ಶೇಖ್, ಶಂಕೂರ್ ಅಲಿಯಾಸ್ ಖಾಜಿ ಮೊಹಮ್ಮದ್ ಖುಶಾಲ್ ಎಂಬವರು ಗಡಿಯುದ್ದಕ್ಕೂ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ್ದರು ಎಂಬ ಮಾಹಿತಿ ಬಯಲಾಗಿತ್ತು.
ಇದೇ ಸಂದರ್ಭದಲ್ಲಿ ಈ ಭಯೋತ್ಪಾದನಾ ಘಟಕದ ಪ್ರಮುಖ ಸಂಚುಕೋರ ಎನ್ನಲಾದ ರಿಯಾಜ್ ಅಹ್ಮದ್ ತಲೆಮರೆಸಿಕೊಂಡಿದ್ದ. ಈ ಬಗ್ಗೆ ತನಿಖೆ ಮುಂದುವರೆಸಿದ್ದ ಅಧಿಕಾರಿಗಳಿಗೆ ಈತ ದೆಹಲಿಗೆ ಪಲಾಯನಗೊಂಡಿದ್ದ ವಿಷಯ ಲಭ್ಯವಾಗಿತ್ತು. ಅಂತೆಯೇ, ಜಮ್ಮು ಮತ್ತು ಕಾಶ್ಮೀರದ ತನಿಖಾಧಿಕಾರಿಗಳು ದೆಹಲಿಯ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೇ, ಫೆಬ್ರವರಿ 4ರಂದು ದೆಹಲಿ ರೈಲ್ವೆ ನಿಲ್ದಾಣಕ್ಕೆ ರಿಯಾಜ್ ಅಹ್ಮದ್ ತಲುಪಿದ್ದ ಮಾಹಿತಿ ಲಭ್ಯವಾಗಿತ್ತು. ಅದರಂತೆ, ಇನ್ಸ್ಪೆಕ್ಟರ್ ವಿಶ್ವನಾಥ್ ಪಾಸ್ವಾನ್, ಸಬ್ ಇನ್ಸ್ಪೆಕ್ಟರ್ ನಸೀಬ್ ಸಿಂಗ್ ನೇತೃತ್ವದ ಪೊಲೀಸ್ ಸಿಬ್ಬಂದಿ ತಕ್ಷಣವೇ ರೈಲ್ವೆ ನಿಲ್ದಾಣಕ್ಕೆ ಧಾವಿಸಿ ಬೆಳಗಿನ ಜಾವ ಉಗ್ರ ರಿಯಾಜ್ ಅಹ್ಮದ್ನನ್ನು ಬಂಧಿಸಿದ್ದಾರೆ.