ಪಥನಂತಿಟ್ಟ, ಕೇರಳ: ಶಬರಿಮಲೆ ದೇಗುಲದ ಪವಿತ್ರ 18 ಮೆಟ್ಟಿಲುಗಳ ಮೇಲೆ ಪೊಲೀಸರು ಸಮವಸ್ತ್ರ ಧರಿಸಿದ ಕೇರಳ ಪೊಲೀಸರು ನಿಂತಿರುವ ಚಿತ್ರವೊಂದು ವೈರಲ್ ಆಗಿದ್ದು, ವಿವಾದ ಸೃಷ್ಟಿಸಿದೆ. ಇದು ದೇವಾಲಯದ ಸಂಪ್ರದಾಯಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ. ವಿವಾದವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಕೇರಳದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಲಾಖೆಗೆ ಸೂಚಿಸಿದ್ದಾರೆ.
ಗರ್ಭಗುಡಿಗೆ ಬೆನ್ನು ಮಾಡಿ ನಿಂತ ಪೊಲೀಸರು:ಈ ಚಿತ್ರವನ್ನು ಶನಿವಾರ ತೆಗೆಯಲಾಗಿದ್ದು, ಇದರಲ್ಲಿ ಸಮವಸ್ತ್ರದಲ್ಲಿರುವ ಸುಮಾರು 28 ಪೊಲೀಸರು ಗರ್ಭಗುಡಿಗೆ ಬೆನ್ನು ಮಾಡಿ ನಿಂತಿರುವುದು ಕಾಣಿಸಿದೆ. ಇದು ದೇವಾಲಯದ ಸಂಪ್ರದಾಯ ಮತ್ತು ಭಕ್ತರ ನಂಬಿಕೆಗಳ ಉಲ್ಲಂಘನೆಯಾಗಿದೆ ಎನ್ನಲಾಗಿದೆ. ಪ್ರತಿದಿನದ ವಾಡಿಕೆಯಂತೆ ಮಧ್ಯಾಹ್ನ ದೇವಸ್ಥಾನದ ಬಾಗಿಲು ಮುಚ್ಚಿದ ನಂತರ ಈ ಫೋಟೊ ಸೆರೆಹಿಡಿಯಲಾಗಿದೆ ಎನ್ನಲಾಗಿದೆ.
ದೇವಾಲಯದ ಪುರೋಹಿತರು ಸಹ ಗರ್ಭಗುಡಿಯ ಕಡೆಗೆ ಮುಖ ಮಾಡಿಕೊಂಡೇ ಈ 18 ಮೆಟ್ಟಿಲುಗಳನ್ನು ಇಳಿಯುತ್ತಾರೆ ಎಂಬುದು ಗಮನಾರ್ಹ.
ಭಕ್ತರ ಜನಸಂದಣಿ ನಿಯಂತ್ರಣಕ್ಕೆ ನಿಯೋಜಿಸಲಾದ ಪೊಲೀಸರು ಮೆಟ್ಟಿಲುಗಳ ಮೇಲೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ದೇವಾಲಯದಲ್ಲಿ ಎರಡು ತಿಂಗಳ ಉತ್ಸವದ ಋತು ನವೆಂಬರ್ 16 ರಂದು ಪ್ರಾರಂಭವಾಗಿದೆ. ಪ್ರತಿದಿನ 70,000 ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶವಿದ್ದು, ಆನ್ ಲೈನ್ ಮೂಲಕ ದರ್ಶನದ ಬುಕಿಂಗ್ ಮಾಡಬಹುದಾಗಿದೆ.