ಕೋಯಿಕ್ಕೋಡ್(ಕೇರಳ):ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಫಿಸಿಯೋಥೆರಪಿಸ್ಟ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಆರೋಪಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.
ತಿರುವನಂತಪುರಂನ 29 ವರ್ಷದ ಭೌತಚಿಕಿತ್ಸಕ ಬಿ.ಮಹೇಂದ್ರನ್ ನಾಯರ್ ವಿರುದ್ಧ ಈ ದೂರು ದಾಖಲಾಗಿದೆ. ಕೋಯಿಕ್ಕೋಡ್ ಬೀಚ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ವಾರದ ಆರಂಭದಲ್ಲಿ ಬಾಲಕಿಯೊಬ್ಬಳು ಫಿಸಿಯೋಥೆರಪಿಗೆ ಒಳಗಾಗಿದ್ದಳು. ಈ ವೇಳೆ, ಆಕೆಯೊಂದಿಗೆ ಮಹೇಂದ್ರನ್ ನಾಯರ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನೊಂದ ಬಾಲಕಿ ತನ್ನ ತಂದೆಗೆ ಮಾಹಿತಿ ನೀಡಿದ್ದಳು. ಬಳಿಕ ಈ ವಿಷಯವನ್ನು ಆಸ್ಪತ್ರೆಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅಲ್ಲಿಂದ ಪೊಲೀಸರಿಗೆ ಗುರುವಾರ ದೂರು ನೀಡಲಾಗಿದೆ. ಈ ಬಗ್ಗೆ ಶುಕ್ರವಾರ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ''ಮಹಿಳಾ ರೋಗಿಗೆ ಕಿರುಕುಳ ಸಂಬಂಧ ಗುರುವಾರ ದೂರು ಸ್ವೀಕರಿಸಿದ್ದೇವೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 75, 76 ಮತ್ತು 79ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ'' ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಆರೋಪಿ ಬೇರೆಯ ಜಿಲ್ಲೆಯಿಂದ ಇಲ್ಲಿಗೆ ವರ್ಗಾವಣೆ ಮಾಡಲಾಗಿತ್ತು. ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆ ಮೇರೆಗೆ ಸದ್ಯ ಆರೋಪಿಯನ್ನು ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ. ಆದರೆ, ಇನ್ನೂ ಬಂಧನದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕಡಿಮೆ ಬೆಲೆಗೆ ವಿಲ್ಲಾ, ಫ್ಲ್ಯಾಟ್ ಹೆಸರಲ್ಲಿ ₹60 ಕೋಟಿ ವಂಚನೆ: GSR ಇನ್ಫ್ರಾ ಎಂಡಿ ಅರೆಸ್ಟ್