ಕರ್ನಾಟಕ

karnataka

ETV Bharat / bharat

ಕೇಜ್ರಿವಾಲ್ ಬಂಧನ; ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದೇನು? - DELHI EXCISE POLICY SCAM - DELHI EXCISE POLICY SCAM

ಮದ್ಯದ ವಿರುದ್ಧ ಅರವಿಂದ್ ಕೇಜ್ರಿವಾಲ್ ದನಿ ಎತ್ತುತ್ತಿದ್ದರು. ಈಗ ಅವರೇ ಮದ್ಯ ನೀತಿಗಳನ್ನು ಮಾಡಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ. ಅವರ ಬಂಧನಕ್ಕೆ ಅವರದೇ ಆದ ಕೃತ್ಯಗಳೇ ಕಾರಣ ಎಂದು ಹೋರಾಟಗಾರ ಅಣ್ಣಾ ಹಜಾರೆ ತಿಳಿಸಿದ್ದಾರೆ.

Anna Hazare Reaction on Arvind Kejriwal
ಕೇಜ್ರಿವಾಲ್ ಬಂಧನದ ಬಗ್ಗೆ ಅಣ್ಣಾ ಹಜಾರೆ ಪ್ರತಿಕ್ರಿಯೆ

By ETV Bharat Karnataka Team

Published : Mar 22, 2024, 4:28 PM IST

ಅಹಮದ್‌ನಗರ (ಮಹಾರಾಷ್ಟ್ರ):ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಪ್ರತಿಕ್ರಿಯಿಸಿದ್ದಾರೆ. ತಾವು ಮಾಡಿದ ಕೆಲಸದಿಂದಲೇ ಕೇಜ್ರಿವಾಲ್ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಒಂದು ಕಾಲದ ಒಡನಾಡಿಯಾದ ಅಣ್ಣಾ ಹಜಾರೆ ಹೇಳಿದ್ದಾರೆ.

2011ರಲ್ಲಿ ಲೋಕಪಾಲ ಚಳವಳಿಯ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಅಣ್ಣಾ ಹಜಾರೆ ಒಟ್ಟಿಗೆ ವೇದಿಕೆ ಹಂಚಿಕೊಂಡು ಹೋರಾಟ ನಡೆಸಿದ್ದರು. ನಂತರದಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್​ ಸ್ಪರ್ಧಿಸಲು ತಮ್ಮದೇ ಆದ ಆಮ್​ ಆದ್ಮಿ ಪಕ್ಷವನ್ನು ಪ್ರಾರಂಭಿಸಿದ್ದರು. ಕಳೆದ ಎರಡು ಅವಧಿಗಳಿಂದ ದೆಹಲಿ ಸಿಎಂ ಆಗಿರುವ ಕೇಜ್ರಿವಾಲ್​, ಅಬಕಾರಿ ನೀತಿ ಹಗರಣದಲ್ಲಿ ಗುರುವಾರ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದಾರೆ.

ಈ ಕುರಿತು ಇಂದು ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಅಣ್ಣಾ ಹಜಾರೆ ಮಾತನಾಡಿ, ಅರವಿಂದ್ ಕೇಜ್ರಿವಾಲ್​ ನನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಅಲ್ಲದೇ, ಸ್ವತಃ ತಾವೇ ಮದ್ಯದ ವಿರುದ್ಧ ದನಿ ಎತ್ತುತ್ತಿದ್ದರು. ಈಗ ಅದೇ ಅರವಿಂದ್ ಕೇಜ್ರಿವಾಲ್ ಮದ್ಯ ನೀತಿಗಳನ್ನು ಮಾಡಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ. ಅವರ ಬಂಧನಕ್ಕೆ ಅವರದೇ ಆದ ಕೃತ್ಯಗಳೇ ಕಾರಣ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಇಡಿ ಅಧಿಕಾರಿಗಳಿಂದ ದೆಹಲಿ ಸಿಎಂ ಕೇಜ್ರಿವಾಲ್ ಅರೆಸ್ಟ್ ​

ಅಲ್ಲದೇ, ಮದ್ಯ ನೀತಿ ಬಗ್ಗೆ ಕೇಜ್ರಿವಾಲ್‌ ಅವರಿಗೆ ನಾನು ಎರಡು ಬಾರಿ ಪತ್ರ ಬರೆದಿದ್ದೆ ಎಂದು ಹಜಾರೆ ಮಾಹಿತಿ ನೀಡಿದ್ದಾರೆ. ಆ ನೀತಿ ಕೆಟ್ಟದ್ದೋ ಅಥವಾ ಒಳ್ಳೆಯದೋ ಎಂಬುದು ಬೇರೆ ವಿಷಯ. ಆದರೆ, ಮದ್ಯಪಾನ ಕೆಟ್ಟದ್ದಾಗಿರುವುದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಅದೇ ಮದ್ಯ ಕೊಲೆಗೂ ಕಾರಣವಾಗುತ್ತಿದೆ. ಈಗ ಅವರನ್ನೇ ಬಂಧಿಸಲಾಗಿದ್ದು, ಇದನ್ನು ಅವರು ಮತ್ತು ಅವರ ಸರ್ಕಾರ ನೋಡಿಕೊಳ್ಳಲಿದೆ. ಹಾಗಾಗಿ ಬಂಧಿಸಿದ್ದಕ್ಕೆ ನನಗೆ ಬೇಸರವಿಲ್ಲ ಎಂದು ವಿವರಿಸಿದ್ದಾರೆ.

2021-22ರಲ್ಲಿ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರವು ಹೊಸ ಅಬಕಾರಿ ನೀತಿಯನ್ನು ರೂಪಿಸಿತ್ತು. ಆದರೆ, ಇದನ್ನು ರೂಪಿಸುವಲ್ಲಿ ಮತ್ತು ಜಾರಿ ಮಾಡುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಆರೋಪಗಳು ಕಾರಣದಿಂದಲೇ ನೀತಿಯನ್ನೇ ರದ್ದುಗೊಳಿಸಲಾಗಿದೆ. ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಆರೋಪದ ಸಂಬಂಧ ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿವೆ.

ಈಗಾಗಲೇ ಇದೇ ಪ್ರಕರಣದಲ್ಲಿ ಆಪ್​ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್, ತೆಲಂಗಾಣದ ಬಿಆರ್​ಎಸ್​ ಪಕ್ಷದ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಬಂಧನಕ್ಕೆ ಒಳಗಾಗಿದ್ದಾರೆ. ಇಡಿ ಸಲ್ಲಿಸಿರುವ ಚಾರ್ಜ್ ಶೀಟ್‌ಗಳಲ್ಲಿ ಕೇಜ್ರಿವಾಲ್ ಹೆಸರನ್ನೂ ಹಲವು ಬಾರಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಇಡಿ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್​ ಪಡೆದ ಸಿಎಂ ಕೇಜ್ರಿವಾಲ್

ABOUT THE AUTHOR

...view details