ನವದೆಹಲಿ:ಫೆಬ್ರವರಿ 5 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತೆ ಗೆದ್ದು ಬಂದರೆ ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯ ಯುವಕರಿಗೆ ಉದ್ಯೋಗ ನೀಡುವುದೇ ನಮ್ಮ ಮೊದಲ ಗುರಿ. ಉದ್ಯೋಗ ಸೃಷ್ಟಿ ಮಾಡುವುದರ ಜೊತೆಗೆ ನಿರುದ್ಯೋಗ ಕೊನೆಗೊಳಿಸುವುದು ನಮ್ಮ ಮೊದಲ ಆಯ್ಕೆ ಆಗಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದರು.
ಯುವಕರಿಗೆ ಉದ್ಯೋಗ ಒದಗಿಸುವುದೇ ನಮ್ಮ ಮೊದಲ ಆದ್ಯತೆ:ಚುನಾವಣೆ ಹಿನ್ನೆಲೆ ವಿಡಿಯೋ ಸಂದೇಶ ಕಳುಹಿಸಿದ್ದು, "ನಮ್ಮ ಯುವಕರಿಗೆ ಉದ್ಯೋಗ ಒದಗಿಸುವುದು ನನ್ನ ಮೊದಲ ಆದ್ಯತೆ. ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ನಮ್ಮ ತಂಡವು ಯೋಜನೆಯೊಂದನ್ನು ರೂಪಿಸುತ್ತಿದೆ. ನಮ್ಮ ಯುವಕರು ಶಿಕ್ಷಣ ಪೂರ್ಣಗೊಳಿಸಿದ ಬಳಿಕವೂ ಕೆಲಸ ಹುಡುಕುತ್ತಾ ಮನೆಯಲ್ಲಿ ಕುಳಿತುಕೊಳ್ಳುವುದನ್ನು ನೋಡುವುದು ನನಗೆ ತುಂಬಾ ದುಃಖವನ್ನುಂಟುಮಾಡುತ್ತದೆ. ಉದ್ಯೋಗ ಸಿಗದಿದ್ದಕ್ಕೆ ಕೆಲವರು ದುರದೃಷ್ಟವಶಾತ್, ಕೆಟ್ಟ ಸಹವಾಸಕ್ಕೆ ಸಿಲುಕುತ್ತಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರುವುದು ಕೂಡ ನಮ್ಮ ಉದ್ದೇಶ. ನಿರುದ್ಯೋಗದಿಂದಲೇ ಕುಟುಂಬದಲ್ಲಿ ವೈಮನಸ್ಸುಗಳು ಹೆಚ್ಚಾಗುತ್ತಿವೆ. ಇದು ಕೊನೆಯಾಗಬೇಕು. ಮುಂದಿನ ಐದು ವರ್ಷಗಳಲ್ಲಿ, ಇತರ ಅಭಿವೃದ್ಧಿ ಕಾರ್ಯಗಳ ಜೊತೆಗೆ, ದೆಹಲಿಯಲ್ಲಿ ನಿರುದ್ಯೋಗವನ್ನು ಕೊನೆಗೊಳಿಸುವುದು ಮತ್ತು ನಮ್ಮ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ನನ್ನ ಪ್ರಮುಖ ಆದ್ಯತೆಯಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ತಮ್ಮ ತಂಡವು ಸಮಗ್ರ ಯೋಜನೆಯನ್ನು ಸಕ್ರಿಯವಾಗಿ ಸಿದ್ಧಪಡಿಸುತ್ತಿದೆ" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ನಮ್ಮ ಬಳಿ ದೇಶಭಕ್ತ ಅದ್ಬುತ ತಂಡವೇ ಇದೆ:"ನಮ್ಮಲ್ಲಿ ವಿದ್ಯಾವಂತ, ಬದ್ಧತೆ ಮತ್ತು ದೇಶಭಕ್ತ ವ್ಯಕ್ತಿಗಳ ಒಂದು ಅದ್ಭುತ ತಂಡವೇ ಇದೆ. ನಮ್ಮ ಯುವಕರಿಗೆ ಉದ್ಯೋಗ ಒದಗಿಸಲು ನಾವು ದೃಢನಿಶ್ಚಯ ಮಾಡಿದ್ದೇವೆ. ಲಾಕ್‌ಡೌನ್ ವೇಳೆ ಎಲ್ಲವೂ ಸ್ಥಗಿತಗೊಂಡಾಗ, ದೆಹಲಿ ಸರ್ಕಾರದ ಸಹಾಯದಿಂದ 12 ಲಕ್ಷ ಜನರಿಗೆ ಉದ್ಯೋಗವನ್ನು ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಪಂಜಾಬ್‌ನಲ್ಲಿರುವ ನಮ್ಮ ಸರ್ಕಾರವು ಕೇವಲ ಎರಡು ವರ್ಷಗಳಲ್ಲಿ ಈಗಾಗಲೇ 48,000 ಸರ್ಕಾರಿ ಉದ್ಯೋಗಗಳನ್ನು ಯುವಕರಿಗೆ ಒದಗಿಸಿದೆ. 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಖಾಸಗಿ ಉದ್ಯೋಗಗಳನ್ನು ಒದಗಿಸಿದೆ. ದೆಹಲಿಯಲ್ಲಿ ನಾವು ಅದೇ ರೀತಿ ಮಾಡಲು ಸಮರ್ಥರಾಗಿದ್ದೇವೆ" ಎಂದು ಹೇಳಿದರು.
ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಎಎಪಿ, ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಮಹತ್ವದ ಸಾಧನೆಗಳನ್ನು ವಿವರಿಸಿದ ಅವರು, "ಇಲ್ಲಿನ ಜನರಿಗೆ ಉಚಿತ ವಿದ್ಯುತ್, ನೀರು ಮತ್ತು ಗುಣಮಟ್ಟದ ಆರೋಗ್ಯ ನೀಡಲು ಒತ್ತು ಕೊಡಲಾಗಿದೆ. ಸರ್ಕಾರಿ ಶಾಲೆಗಳನ್ನು ಸುಸ್ಥಿತಿಯಲ್ಲಿ ಇಡಲಾಗಿದೆ" ಎಂದು ಇದೇ ವೇಳೆ ಹೇಳಿದರು.
"ನಾನು ಇದನ್ನು ಒಬ್ಬಂಟಿಯಾಗಿ ಮಾಡಲು ಸಾಧ್ಯವಿಲ್ಲ. ಆದರೆ, ನಿಮ್ಮ ಬೆಂಬಲದಿಂದ ನಾವು ಇದನ್ನು ಸಾಧಿಸಬಹುದು" ಎಂದು ಹೇಳುವ ಮೂಲಕ ಕೇಜ್ರಿವಾಲ್, ಸಾರ್ವಜನಿಕರಿಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಾ ತಮ್ಮ ವಿಡಿಯೋ ಸಂದೇಶವನ್ನು ಮುಕ್ತಾಯಗೊಳಿಸಿದರು.
ಇದನ್ನೂ ಓದಿ: 'ತೆರಿಗೆ ಭಯೋತ್ಪಾದನೆಗೆ ಬಲಿಯಾದ ಮಧ್ಯಮ ವರ್ಗ': ಕೇಂದ್ರದ ಮುಂದೆ 7 ಬೇಡಿಕೆಗಳನ್ನಿಟ್ಟ ಕೇಜ್ರಿವಾಲ್ - TAX TERRORISM