ಅಂಬಾಲಾ(ಹರಿಯಾಣ): ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಮತ್ತು ಹರಿಯಾಣದ ಮಾಜಿ ಸಚಿವ ಅನಿಲ್ ವಿಜ್, "ಅವರು ಮುಖ್ಯಮಂತ್ರಿಯ ಸಹಿಯನ್ನು ಬಳಸುವಂತಿಲ್ಲ ಅಥವಾ ಮುಖ್ಯಮಂತ್ರಿ ಕಚೇರಿಗೂ ಹೋಗುವಂತಿಲ್ಲ" ಎಂದು ಹೇಳಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜೂನ್ 1ರವರೆಗೂ ಮಧ್ಯಂತರ ಜಾಮೀನು ನೀಡಿದೆ.
"ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿರುವಾಗಲೇ ಬಂಧಿಸಲ್ಪಟ್ಟು ಜೈಲಿಗೆ ಹೋಗಿದ್ದರು. ಸದ್ಯ ಜಾಮೀನು ಸಿಕ್ಕಿರುವುದು ಕೇಜ್ರಿವಾಲ್ ಅವರಿಗೆ ಮಾತ್ರವೇ ಹೊರತು ಮುಖ್ಯಮಂತ್ರಿಗಲ್ಲ. ಮುಖ್ಯಮಂತ್ರಿ ಇನ್ನೂ ಜೈಲಿನಲ್ಲೇ ಇದ್ದಾರೆ. ಹೀಗಾಗಿ ಅವರು ಮುಖ್ಯಮಂತ್ರಿಯಾಗಿ ಸಹಿ ಮಾಡಲು ಸಾಧ್ಯವಿಲ್ಲ ಅಥವಾ ಅವರು ಮುಖ್ಯಮಂತ್ರಿ ಕಚೇರಿಗೆ ಹೋಗಲು ಸಾಧ್ಯವಿಲ್ಲ" ಎಂದು ಹರಿಯಾಣದ ಮಾಜಿ ಸಚಿವ ವಿಜ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದರು.
ಏತನ್ಮಧ್ಯೆ ಸಿಎಂ ಕೇಜ್ರಿವಾಲ್ ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ತಿಹಾರ್ ಜೈಲಿನಿಂದ ಹೊರಬಂದ ನಂತರ ಇದು ಶಾಸಕಾಂಗಗಳೊಂದಿಗಿನ ಅವರ ಮೊದಲ ಸಭೆಯಾಗಿದೆ.
"ಬೆಳಿಗ್ಗೆ 11 ಗಂಟೆಗೆ - ಶಾಸಕರ ಸಭೆ, ಮಧ್ಯಾಹ್ನ 1 ಗಂಟೆಗೆ - ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ, ಸಂಜೆ 4 ಗಂಟೆಗೆ - ರೋಡ್ ಶೋ - ನವದೆಹಲಿ ಲೋಕಸಭೆ - ಮೋತಿ ನಗರ, ಸಂಜೆ 6 ಗಂಟೆಗೆ - ರೋಡ್ ಶೋ - ಪಶ್ಚಿಮ ದೆಹಲಿ ಲೋಕಸಭೆ - ಉತ್ತಮ್ ನಗರ್. ನೀವೆಲ್ಲರೂ ಬನ್ನಿ" ಎಂದು ಕೇಜ್ರಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿನಲ್ಲಿದ್ದ ಕೇಜ್ರಿವಾಲ್ ಅವರು ಮೇ 10ರಂದು ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಮುಖ್ಯಮಂತ್ರಿ ಕಚೇರಿ ಅಥವಾ ದೆಹಲಿ ಸಚಿವಾಲಯಕ್ಕೆ ಭೇಟಿ ನೀಡಕೂಡದು ಎಂಬ ಷರತ್ತಿನೊಂದಿಗೆ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. 2024ರ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು.
ಕೇಜ್ರಿವಾಲ್ ಯಾವುದೇ ಸಾಕ್ಷಿಗಳೊಂದಿಗೆ ಮಾತನಾಡುವಂತಿಲ್ಲ ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಕಡತಗಳನ್ನು ಪರಿಶೀಲಿಸುವಂತಿಲ್ಲ ಎಂದು ಮಧ್ಯಂತರ ಜಾಮೀನು ನೀಡುವ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ಪ್ರಸ್ತುತ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ಕೂಡ ಅವರು ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ನ್ಯಾಯಪೀಠ ಆದೇಶಿಸಿದೆ.
ಇದನ್ನೂ ಓದಿ:ಬದರಿನಾಥ ಧಾಮ್ ಇಂದಿನಿಂದ ಭಕ್ತರಿಗೆ ಮುಕ್ತ: ಮುಂದಿನ 6 ತಿಂಗಳವರೆಗೆ ದರ್ಶನ ಭಾಗ್ಯ - Badrinath Dham