ತಿರುವನಂತಪುರ (ಕೇರಳ):ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿ ಜೈಲು ಪಾಲಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಜೈಲಿನಿಂದಲೇ ಆಡಳಿತ ನಡೆಸುತ್ತೇನೆ ಎಂದು ಹೇಳುವುದು ಪ್ರಾಯೋಗಿಕವಾಗಿ ಸರಿಯಲ್ಲ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ.ಆಚಾರಿ ಹೇಳಿದ್ದಾರೆ.
ಗುರುವಾರ ಅರವಿಂದ್ ಕೇಜ್ರಿವಾಲ್ ಬಂಧನವಾದ ನಂತರ ಆಮ್ ಆದ್ಮಿ ಪಕ್ಷದ ಮುಖಂಡರು, ಕೇಜ್ರಿವಾಲ್ ಜೈಲಿನಿಂದಲೇ ತಮ್ಮ ಸರ್ಕಾರ ನಡೆಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಈ ರೀತಿಯಾದ ಆಡಳಿತ ನಡೆಸಬಹುದೇ ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಪಿ.ಡಿ.ಟಿ.ಆಚಾರಿ ಮಾತನಾಡಿ, ಆಮ್ ಆದ್ಮಿ ಪಕ್ಷವು ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದೆ. ಆಪ್ ಶಾಸಕಾಂಗ ಪಕ್ಷವು ಕೇಜ್ರಿವಾಲ್ ಅವರ ಮೇಲೆ ಯಾವುದೇ ಅವಿಶ್ವಾಸ ಮಂಡನೆಯ ಪ್ರಸ್ತಾಪ ದಾಖಲಿಸಿಲ್ಲ. ಯಾವುದೇ ನ್ಯಾಯಾಲಯವು ರಾಜೀನಾಮೆ ನೀಡುವಂತೆ ಆದೇಶಿಸಿಲ್ಲ. ಇದನ್ನೆಲ್ಲ ಗಮನಿಸಿದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ತಪ್ಪೇನಿಲ್ಲ. ಆದರೆ, ಜೈಲಿನಿಂದಲೇ ಆಡಳಿತ ನಡೆಸುತ್ತೇನೆ ಎಂದು ಹೇಳುವುದು ಕಾರ್ಯಸಾಧ್ಯವಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಇಡಿ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆದ ಸಿಎಂ ಕೇಜ್ರಿವಾಲ್
ಮುಖ್ಯಮಂತ್ರಿ ಆಡಳಿತ ನಡೆಸುವಾಗ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಸಂಪುಟ ಸಭೆಗಳ ಅಧ್ಯಕ್ಷತೆ ವಹಿಸಬೇಕು. ಕಡತಗಳನ್ನು ವಿಲೇವಾರಿ ಮಾಡಬೇಕು. ಇದನ್ನು ವೈಯಕ್ತಿಕವಾಗಿ ಅಥವಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಬಹುದು. ಆದರೆ, ಜೈಲು ಶಿಕ್ಷೆಯ ಸಂದರ್ಭದಲ್ಲಿ ಇವೆರಡೂ ಸಾಧ್ಯವಿಲ್ಲ. ಸದ್ಯದ ತಾತ್ಕಾಲಿಕ ಬಿಕ್ಕಟ್ಟನ್ನು ಹೋಗಲಾಡಿಸಲು ಆಡಳಿತದ ಜವಾಬ್ದಾರಿಯನ್ನು ಬೇರೆಯವರಿಗೆ ಹಸ್ತಾಂತರಿಸುವುದು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಅಭಿಪ್ರಾಯಪಟ್ಟರು.
ಜೈಲಿನಲ್ಲಿರುವ ಮುಖ್ಯಮಂತ್ರಿಗಳನ್ನು ಬದಲಾಯಿಸಲು ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಪರಿಹಾರವಿಲ್ಲ. ಯಾವುದೇ ಪ್ರಾಶಸ್ತ್ಯವೂ ಇಲ್ಲ. ತಮಿಳುನಾಡಿನ ಜಯಲಲಿತಾ ಮತ್ತು ಜಾರ್ಖಂಡ್‌ನ ಹೇಮಂತ್ ಸೊರೆನ್ ಪ್ರಕರಣಗಳು ನಮ್ಮ ಮುಂದಿದ್ದು, ಇಬ್ಬರೂ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಎಂ ರಾಜೀನಾಮೆ ನೀಡಿದರೆ ಇಡೀ ಸಚಿವ ಸಂಪುಟವನ್ನೇ ತೆಗೆಯಬೇಕು. ನಂತರ ನೂತನ ಮುಖ್ಯಮಂತ್ರಿ ಹಾಗೂ ನೂತನ ಸಚಿವರು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಬೇಕು. ಆದರೆ, ಮುಖ್ಯಮಂತ್ರಿಯನ್ನು ಬಂಧಿಸಿದಾಗ ಹಾಗೆ ಮಾಡಬೇಕೆಂಬುದು ಕಡ್ಡಾಯವಲ್ಲ. ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ ಎಂದು ವಿವರಿಸಿದರು.
ಇತ್ತೀಚೆಗೆ ತಮಿಳುನಾಡಿನ ಡಿಎಂಕೆ ಸಚಿವ ಪೊನ್ಮುಡಿ ರಾಜೀನಾಮೆ ನೀಡುವಂತೆ ಹೈಕೋರ್ಟ್ ಹೇಳಿದ್ದರಿಂದ ಅವರು ಸಚಿವ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಅರವಿಂದ್ ಕೇಜ್ರಿವಾಲ್ ಪ್ರಕರಣದಲ್ಲಿ ನ್ಯಾಯಾಲಯವು ಅಂತಹ ಯಾವುದೇ ನಿರ್ದೇಶನವನ್ನು ನೀಡಿಲ್ಲ. ಬಂಧನ ಮತ್ತು ಜೈಲುವಾಸ ಕೇವಲ ತಾತ್ಕಾಲಿಕ. ಆದರೆ, ದಿನನಿತ್ಯದ ಆಡಳಿತದ ಯಾವುದೇ ರೀತಿಯ ಸ್ಥಗಿತವನ್ನು ತಪ್ಪಿಸಲು ಅವರು ಬೇರೆಯವರಿಗೆ ಅಧಿಕಾರವನ್ನು ಹಸ್ತಾಂತರಿಸಬಹುದು. ಇದರರ್ಥ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದಲ್ಲ. ವಿಧಾನಸಭೆಯಲ್ಲಿ ಆಪ್ ಬಹುಮತ ಹೊಂದಿರುವವರೆಗೆ, ಶಾಸಕಾಂಗ ಪಕ್ಷದಲ್ಲಿ ಕೇಜ್ರಿವಾಲ್ ಬಹುಮತವನ್ನು ಹೊಂದಿರುವವರೆಗೆ ಮತ್ತು ನ್ಯಾಯಾಲಯವು ಅವರ ರಾಜೀನಾಮೆಗೆ ಒತ್ತಾಯಿಸದಿರುವವರೆಗೆ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಾವುದೇ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಕೇಜ್ರಿವಾಲ್ ಬಂಧನ; ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದೇನು?