ಲಕ್ನೋ(ಉತ್ತರ ಪ್ರದೇಶ):ಕಾಸಗಂಜ್ನಲ್ಲಿ 2018ರಲ್ಲಿ ತಿರಂಗಾ ಯಾತ್ರೆ ವೇಳೆ ನಡೆದ ಕೋಮು ಘರ್ಷಣೆ ಹಾಗೂ ಚಂದನ್ ಗುಪ್ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ವಿಶೇಷ ನ್ಯಾಯಾಲಯ 28 ಮಂದಿಯನ್ನು ದೋಷಿಗಳೆಂದು ಘೋಷಿಸಿದೆ. ತಿರಂಗಾ ಯಾತ್ರೆ ವೇಳೆ ಚಂದನ್ ಗುಪ್ತಾ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.
ಕೊಲೆ, ಕೊಲೆ ಯತ್ನ, ಗಲಭೆ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದಲ್ಲಿ ಶಿಕ್ಷೆ ವಿಧಿಸಲಾಗಿದೆ. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನಂತರ ಪ್ರಕಟಿಸಲಾಗುವುದು ಎಂದು ವಿಶೇಷ ನ್ಯಾಯಾಧೀಶ ವಿವೇಕಾನಂದ ಶರಣ್ ತ್ರಿಪಾಠಿ ತಿಳಿಸಿದ್ದಾರೆ. ಚಂದನ್ ಗುಪ್ತಾ ಅವರ ಸಾವಿನ ನಂತರ ಈ ಪ್ರದೇಶದಲ್ಲಿ ಕೋಮು ಗಲಭೆ ಭುಗಿಲೆದ್ದಿತ್ತು.
ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಇನ್ನಿಬ್ಬರು ಆರೋಪಿಗಳಾದ ನಾಸಿರುದ್ದೀನ್ ಮತ್ತು ಅಸಿಮ್ ಖುರೇಷಿ ಅವರನ್ನು ನಿರ್ದೋಷಿಗಳೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ತೀರ್ಪು ನೀಡಿದೆ.
ಜನವರಿ 26, 2018ರ ಬೆಳಿಗ್ಗೆ ನಡೆದ ತಿರಂಗಾ ಯಾತ್ರೆಯಲ್ಲಿ ಚಂದನ್ ಗುಪ್ತಾ ಮತ್ತು ಅವರ ಸಹೋದರ ವಿವೇಕ್ ಗುಪ್ತಾ ಭಾಗವಹಿಸಿದ್ದರು. ಮೆರವಣಿಗೆಯು ತಹಸಿಲ್ ರಸ್ತೆಯ ಸರ್ಕಾರಿ ಬಾಲಕಿಯರ ಇಂಟರ್ ಕಾಲೇಜು ಗೇಟ್ ಬಳಿ ತಲುಪಿದಾಗ ಸಲೀಂ, ವಾಸಿಮ್ ಮತ್ತು ನಸೀಮ್ ಸೇರಿದಂತೆ ಗಲಭೆಕೋರರ ಗುಂಪು ಮೆರವಣಿಗೆಯನ್ನು ತಡೆದಿತ್ತು ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.