ಕರ್ನಾಟಕ

karnataka

ETV Bharat / bharat

ಬದುಕಿಗೆ ಕತ್ತಲಾದ ದೀಪ!: ಬೆಂಕಿ ತಗುಲಿ ದಂಪತಿ ಸೇರಿ ಮೂವರು ಸಜೀವ ದಹನ

ರಾತ್ರಿ ಬೆಂಕಿ ಹೊತ್ತಿಕೊಂಡ ನಂತರ ಅವ್ಯವಸ್ಥೆ ಉಂಟಾಯಿತು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Kanpur Kakadev house fire Biscuit businessman and his wife burnt alive
ಬೆಂಕಿ ಅವಘಡ (ETV Bharat)

By ETV Bharat Karnataka Team

Published : Nov 1, 2024, 1:58 PM IST

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಮನೆಯೊಂದರಲ್ಲಿ ಏಕಾಏಕಿ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ ದಂಪತಿ ಸೇರಿ ಮೂವರು ಸಜೀವ ದಹನಗೊಂಡಿದ್ದಾರೆ. ಕಾಕದೇವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಂಡುನಗರ ಪ್ರದೇಶದಲ್ಲಿ ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ.

ಬಿಸ್ಕೆಟ್ ಉದ್ಯಮಿ ಸಂಜಯ್ ಶ್ಯಾಮ್ ದಸಾನಿ ಆತನ ಪತ್ನಿ ಕನಿಕಾ ದಾಸಾನಿ ಹಾಗೂ ಛಾವಿ ಚೌಹಾಣ್ ಮೃತ ದುರ್ದೈವಿಗಳು. ದೇವರ ಕೋಣೆಯಲ್ಲಿ ಹಚ್ಚಿಟ್ಟಿದ್ದ ದೀಪದಿಂದ ತಾವು ಮಲಗಿದ್ದ ಮನೆಯ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಬಿಸ್ಕತ್ತು ಉದ್ಯಮಿಯಾಗಿದ್ದ ಪಾಂಡವ್ ನಗರದ ನಿವಾಸಿ ಸಂಜಯ್ ಶ್ಯಾಮ್ ದಸಾನಿ ದಂಪತಿ ಗುರುವಾರ ತಡರಾತ್ರಿ ದೀಪಾವಳಿ ಪೂಜೆ ಮುಗಿಸಿ ಮಲಗಿದ್ದರು. ಮಲಗುವುದಕ್ಕೂ ಮುನ್ನ ದೇವರ ಕೋಣೆಯಲ್ಲಿ ಚಿಕ್ಕದಾದ ದೀಪ ಹಚ್ಚಿದ್ದರು. ಅದೇ ದೀಪದಿಂದ ಮನೆ ಕೊಠಡಿಗೆ ಬೆಂಕಿ ತಾಗಿದೆ. ರಾತ್ರಿಯಿಡೀ ಉರಿದಿದೆ. ಬೆಂಕಿ ಹೊತ್ತಿಕೊಂಡಾಗ ಮೂವರೂ ಗಾಢ ನಿದ್ರೆಯಲ್ಲಿದ್ದರು. ಹೊರಬರಲು ಸಾಧ್ಯವಾಗದೇ ಉಸಿರುಗಟ್ಟಿ ಅದೇ ಕೊಠಡಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆ ಬಳಿಕ ಬೆಂಕಿ ಇಡೀ ಕೊಠಡಿಗೆ ಅವರಿಸಿಕೊಂಡಿದ್ದರಿಂದ ಬೆಂಕಿಯಲ್ಲಿ ಮೂವರು ಸಜೀವ ದಹನವಾಗಿರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಡಿಸಿಪಿ ಸೆಂಟ್ರಲ್ ದಿನೇಶ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.

ತಡ ರಾತ್ರಿ 2.30ರ ಸುಮಾರು ಈ ಬೆಂಕಿ ಹೊತ್ತಿಕೊಂಡರಬಹುದು. ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಿಯಂತ್ರಿಸಿದರು. ಆದರೆ, ಅಷ್ಟರಲ್ಲೇ ಮೂವರು ಬೆಂಕಿಯಿಂದ ಸುಟ್ಟು ಕರಕಲಾಗಿದ್ದರು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

ಗುರುವಾರ ಸಂಜೆ ಎಲ್ಲರೂ ದೀಪಾವಳಿಯ ಖುಷಿಯಲ್ಲಿ ಭಾಗಿಯಾಗಿದ್ದರು. ಇಡೀ ಮನೆಯನ್ನು ಬಣ್ಣಬಣ್ಣದ ಅಂಚುಗಳಿಂದ ಅಲಂಕರಿಸಲಾಗಿತ್ತು. ರಂಗೋಲಿಯನ್ನೂ ಹಾಕಲಾಗಿತ್ತು. ದೀಪಾವಳಿ ಪೂಜೆಯ ನಂತರ ಎಲ್ಲರೂ ಪರಸ್ಪರ ಶುಭಾಶಯ ಕೋರಿದ್ದರು. ಈ ನಗು ಮರುದಿನ ಬೆಳಗ್ಗೆ ಅಹಿತಕರವಾಗಿ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ ಎಂದು ಉದ್ಯಮಿಯ ಸಹೋದರರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕಾಕದೇವ್ ಪೊಲೀಸ್ ಠಾಣಾ ಪ್ರಭಾರಿ ಮನೋಜ್ ಸಿಂಗ್, ಎಸಿಪಿ ಸ್ವರೂಪ್ ನಗರ್ ಐಪಿ ಸಿಂಗ್ ಸ್ಥಳಕ್ಕೆ ಆಗಮಿಸಿ ಪರಿಶಿಲೀಸಿದರು. ಘಟನೆ ಬಗ್ಗೆ ಮಿಷನರೇಟ್ ಪೊಲೀಸ್ ಉನ್ನತ ಅಧಿಕಾರಿಗಳು ಕೂಡ ತಮ್ಮ ಮಟ್ಟದಲ್ಲಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ:ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅನಾಹುತ: 4 ಕಾರು, 1 ಆಟೋ ಬೆಂಕಿಗೆ ಆಹುತಿ. ತಮಿಳುನಾಡಲ್ಲೂ ಭಾರಿ ಬೆಂಕಿ

ABOUT THE AUTHOR

...view details