ಕಣ್ಣೂರು(ಕೇರಳ): ಕಣ್ಣೂರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ನವೀನ್ ಬಾಬು ಅವರು ಮಂಗಳವಾರ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆಂಗನ್ನೂರ್ ರೈಲ್ವೆ ನಿಲ್ದಾಣದಲ್ಲಿ ಬಾಬು ಅವರ ಪತ್ನಿ ಅವರಿಗಾಗಿ ಕಾಯುತ್ತಿರುವ ಮಧ್ಯೆಯೇ ಅವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ತವರು ಜಿಲ್ಲೆ ಪಥನಂತಿಟ್ಟಕ್ಕೆ ವರ್ಗಾವಣೆಯಾಗಿದ್ದ ಅವರು, ಏಳು ತಿಂಗಳಲ್ಲಿ ನಿವೃತ್ತರಾಗಲಿದ್ದರು.
ಸೋಮವಾರ ಮಧ್ಯಾಹ್ನ ಕಣ್ಣೂರಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಪಿಐ (ಎಂ) ನ ಹಿರಿಯ ನಾಯಕಿ, ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಪಿ. ದಿವ್ಯಾ ಅವರು ಬಾಬು ಅವರ ವಿರುದ್ಧ ಕೆಲ ಅಸಂಬದ್ಧ ಹೇಳಿಕೆಗಳನ್ನು ನೀಡಿದ ನಂತರ ಬಾಬು ತೀವ್ರ ನೊಂದಿದ್ದರು ಎಂದು ಸ್ಥಳದಲ್ಲಿದ್ದ ಜನ ತಿಳಿಸಿದ್ದಾರೆ. ದಿವ್ಯಾರನ್ನು ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲವಾದರೂ ಅವರು ಬಲವಂತವಾಗಿ ಒಳಗೆ ಬಂದಿದ್ದರು.
ಪೆಟ್ರೋಲ್ ಪಂಪ್ ಮಂಜೂರು ಮಾಡಿಸಿಕೊಳ್ಳಲು ಬಾಬು ಅವರೊಂದಿಗೆ ಮಾತನಾಡುವಂತೆ ವ್ಯಕ್ತಿಯೊಬ್ಬರು ನನಗೆ ಮನವಿ ಮಾಡಿದ್ದರು. ಈ ಬಗ್ಗೆ ಹಲವಾರು ಬಾರು ಬಾಬು ಅವರಿಗೆ ತಿಳಿಸಿದರೂ ಅವರು ಕೆಲಸ ಮಾಡಿ ಕೊಡಲಿಲ್ಲ. ಆದರೆ ಎರಡು ದಿನಗಳ ಮುಂಚೆ ಪೆಟ್ರೋಲ್ ಪಂಪ್ ಅನ್ನು ಅವರು ಮಂಜೂರು ಮಾಡಿದ್ದಾರೆ. ಯಾವ ರೀತಿಯಲ್ಲಿ ಈ ಅನುಮತಿ ನೀಡಲಾಗಿದೆ ಎಂಬುದು ನನಗೆ ತಿಳಿದಿದ್ದು, ಮುಂದಿನ ಎರಡು ದಿನಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸುವುದಾಗಿ ಹೇಳಿದ ದಿವ್ಯಾ ಅಲ್ಲಿಂದ ತೆರಳಿದ್ದರು.
ಬಾಬು ಅವರು ಚೆಂಗನ್ನೂರ್ ಗೆ ಬರಲು ರೈಲು ಹತ್ತಿಲ್ಲ ಎಂದು ತಿಳಿದ ನಂತರ ಅವರ ಪತ್ನಿ ತನ್ನ ಗಂಡನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಬಾಬು ಕಣ್ಣೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.