ಕರ್ನಾಟಕ

karnataka

ETV Bharat / bharat

ಛತ್ತೀಸ್​ಗಢದಲ್ಲಿ ಮೂವರು ನಕ್ಸಲೀಯರ ಬೇಟೆ: ಮುಂದುವರಿದ ಶೋಧ ಕಾರ್ಯಾಚರಣೆ - ಛತ್ತೀಸ್​ಗಢದಲ್ಲಿ ನಕ್ಸಲರ ಬೇಟೆ

ಸುಕ್ಮಾದಲ್ಲಿ ಇಬ್ಬರು ಗ್ರಾಮಸ್ಥರನ್ನು ಕತ್ತು ಸೀಳಿ ಕೊಲೆ ಮಾಡಿದ ಬೆನ್ನಲ್ಲೇ, ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಮೂವರು ನಕ್ಸಲರನ್ನು ಬೇಟೆಯಾಡಿವೆ.

ಛತ್ತೀಸ್​ಗಢದಲ್ಲಿ ಮೂವರು ನಕ್ಸಲೀಯರ ಹತ್ಯೆ
ಛತ್ತೀಸ್​ಗಢದಲ್ಲಿ ಮೂವರು ನಕ್ಸಲೀಯರ ಹತ್ಯೆ

By ETV Bharat Karnataka Team

Published : Feb 25, 2024, 4:07 PM IST

ಕಂಕೇರ್ (ಛತ್ತೀಸ್‌ಗಢ):ನಕ್ಸಲ್​ಪೀಡಿತ ಪ್ರದೇಶವಾದ ಛತ್ತೀಸ್​ಗಢದಲ್ಲಿ ಮತ್ತೆ ರಕ್ತ ಹರಿದಿದೆ. ಇಲ್ಲಿನ ಕಂಕೇರ್​ ಜಿಲ್ಲೆಯ ಹುರತ್​​ರೈ ಅರಣ್ಯ ಪ್ರದೇಶದಲ್ಲಿ ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲೀಯರು ಭದ್ರತಾ ಪಡೆಗಳ ದಾಳಿಗೆ ಹತರಾಗಿದ್ದಾರೆ. ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ಹುರತ್​ರೈ ಅರಣ್ಯದಲ್ಲಿ ನಕ್ಸಲೀಯರು ಅಡಗಿದ್ದಾರೆ ಎಂದು ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಮೀಸಲು ಪಡೆ ಮತ್ತು ಗಡಿ ಭದ್ರತಾ ಪಡೆಯ ಜಂಟಿ ತಂಡಗಳು ಕಾರ್ಯಾಚರಣೆ ನಡೆಸಿದವು. ಈ ವೇಳೆ ನಕ್ಸಲೀಯರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದಾರೆ. ತೀವ್ರ ಕಾದಾಟದಲ್ಲಿ ಮೂವರು ನಕ್ಸಲೀಯರು ಸ್ಥಳದಲ್ಲೇ ಹತರಾಗಿದ್ದಾರೆ.

ಪೊಲೀಸರು ಮತ್ತು ಡಿಆರ್‌ಜಿ ತಂಡಗಳು ಕಂಕೇರ್‌ನ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಈ ಎನ್‌ಕೌಂಟರ್ ಕೋಯಲಿಬೆರಾದ ದಕ್ಷಿಣ ಭಾಗದಲ್ಲಿ ನಡೆದಿದೆ. ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಮೂವರು ನಕ್ಸಳೀಯರ ಶವಗಳು ಮತ್ತು ಶಸ್ತ್ರಾಸ್ತ್ರಗಳು ಸ್ಥಳದಲ್ಲಿ ದೊರಕಿವೆ. ಭದ್ರತಾ ಪಡೆಯ ಸೈನಿಕರು ಸುರಕ್ಷಿತವಾಗಿದ್ದಾರೆ ಎಂದು ಕಂಕೇರ್ ಎಸ್​ಪಿ ಇಂದಿರಾ ಕಲ್ಯಾಣ್​ ಖಚಿತಪಡಿಸಿದ್ದಾರೆ.

ಗ್ರಾಮಸ್ಥರಿಬ್ಬರ ಕತ್ತು ಸೀಳಿದ ನಕ್ಸಲೀಯರು:ಸುಕ್ಮಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಕ್ಸಲೀಯರು ಇತ್ತೀಚಿಗೆ ದಾಳಿ ನಡೆಸಿ ಇಬ್ಬರನ್ನು ಕೊಂದು ಹಾಕಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ಇಂದು ಕಾರ್ಯಾಚರಣೆ ನಡೆಸಿ ಮೂವರನ್ನು ಸಿಆರ್​ಪಿಎಫ್​ ಪಡೆ ಬೇಟೆಯಾಡಿದೆ.

ಪೊಲೀಸ್ ಮಾಹಿತಿದಾರರು ಎಂದು ಶಂಕಿಸಿದ್ದ ನಕ್ಸಲೀಯರು ಇಬ್ಬರು ಗ್ರಾಮಸ್ಥರನ್ನು ಅಪಹರಿಸಿ ಅರಣ್ಯ ಪ್ರದೇಶದೊಳಗೆ ಎಳೆದೊಯ್ದು ಕತ್ತು ಕೊಯ್ದು ಹತ್ಯೆ ಮಾಡಿದ್ದರು. ಮಾವೋ ಸಂಘಟನೆಯ ಪಾಮ್ಡ್ ಏರಿಯಾ ಕಮಿಟಿ ಹತ್ಯೆಯ ಹೊಣೆ ಹೊತ್ತು ಟಿಪ್ಪಣಿಯೊಂದನ್ನು ಬಿಡುಗಡೆ ಮಾಡಿತ್ತು.

ಮೃತರಿಬ್ಬರೂ ನಕ್ಸಲ್ ಪೀಡಿತ ಗ್ರಾಮೀಣ ಪ್ರದೇಶವಾದ ದುಲ್ಲೆಡ್ ಗ್ರಾಮದ ನಿವಾಸಿಗಳಾಗಿದ್ದಾರೆ. ಮೃತರನ್ನು ಸೋದಿ ಹಂಗ ಮತ್ತು ಮದ್ವಿ ನಂದಾ ಎಂದು ಗುರುತಿಸಲಾಗಿತ್ತು. ನಕ್ಸಲೀಯರು ಗ್ರಾಮಸ್ಥರನ್ನು ಅವರ ಮನೆಯಿಂದ ಅಪಹರಿಸಿ ಎಳೆದೊಯ್ದು ಹರಿತವಾದ ಆಯುಧದಿಂದ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿಂತಗುಫಾ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಎರಡೂ ಗ್ರಾಮಸ್ಥರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸ್ಥಳದಿಂದ ನಕ್ಸಲೀಯ ಕರಪತ್ರಗಳನ್ನು ಸಹ ವಶಪಡಿಸಿಕೊಂಡಿತ್ತು. ಇದರಲ್ಲಿ ಹತ್ಯೆಗೀಡಾದ ಗ್ರಾಮಸ್ಥರಿಬ್ಬರೂ ಪೊಲೀಸರಿಗೆ ಮಾಹಿತಿದಾರರು ಎಂದು ನಕ್ಸಲೀಯರು ಆರೋಪಿಸಿದ್ದರು.

ಇದನ್ನೂ ಓದಿ:ನಕ್ಸಲೀಯರ ದಾಳಿಯಲ್ಲಿ ಮೂವರು ಯೋಧರು ಹುತಾತ್ಮ: 14ಕ್ಕೂ ಹೆಚ್ಚು ಸೈನಿಕರಿಗೆ ಗಾಯ

ABOUT THE AUTHOR

...view details