ಮಾಲಿಗಾಂವ್ (ಅಸ್ಸಾಂ): ಪಶ್ಚಿಮ ಬಂಗಾಳದಲ್ಲಿ ಒಂಬತ್ತು ಪ್ರಯಾಣಿಕರ ಜೀವಗಳನ್ನು ಬಲಿ ತೆಗೆದುಕೊಂಡ ಕಾಂಚನಜುಂಗಾ ರೈಲು ಅಪಘಾತದ ಬಳಿಕ ಮಂಗಳವಾರ ಆ ಮಾರ್ಗದಲ್ಲಿ ಸಂಚರಿಸುವ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಾಗೂ ಇನ್ನೂ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ಫ್ರಾಂಟಿಯಾರ್ ರೈಲ್ವೆಯ ಅಧಿಕೃತ ಮಾಹಿತಿಯ ಪ್ರಕಾರ, (15719) ಕತಿಹಾರ್ - ಸಿಲಿಗುರಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್, (15720) ಸಿಲಿಗುರಿ-ಕತಿಹಾರ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್, (12042) ನ್ಯೂ ಜಲ್ಪೈಗುರಿ-ಹೌರಾ ಶತಾಬ್ದಿ ಎಕ್ಸ್‌ಪ್ರೆಸ್, (12041) ಹೌರಾ-ನ್ಯೂರಿಗುರಿ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು (15724) ಸಿಲಿಗುರಿ-ಜೋಗ್ಬಾನಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಅನ್ನು ಇಂದಿನವರೆಗೆ ರದ್ದುಗೊಳಿಸಲಾಗಿದೆ.
ಈಶಾನ್ಯ ಗಡಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡೆ ನೀಡಿದ ಮಾಹಿತಿ ಪ್ರಕಾರ, ನ್ಯೂ ಜಲ್ಪೈಗುರಿಯಿಂದ ನವದೆಹಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 12523 ಅನ್ನು 12 ಗಂಟೆಗೆ ಹೊರಡಲು ರಿಶೆಡ್ಯೂಲ್ ಮಾಡಲಾಗಿದೆ.
ರೈಲ್ವೇ ಪ್ರಕಾರ, ಹೊಸದಿಲ್ಲಿ- ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20504, ಸಿಲ್ಚಾರ್‌ನಿಂದ 13176-ಸೀಲೆದಾ ಕಾಂಚನಜುಂಗಾ ಎಕ್ಸ್‌ಪ್ರೆಸ್, ಮತ್ತು ನ್ಯೂ ಜಲ್ಪೈಗುರಿ-ನವದೆಹಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ.
ಕತಿಹಾರ್ ಈಶಾನ್ಯ ಗಡಿ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಸುರೇಂದ್ರ ಕುಮಾರ್ ಮಾತನಾಡಿ, "ರಾತ್ರಿಯಿಂದ ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ. ನಿನ್ನೆ ನ್ಯೂ ಜಲ್ಪೈಗುರಿ ಜಂಕ್ಷನ್ ಕಡೆಗೆ ಎರಡು ಸರಕು ರೈಲುಗಳು ಮತ್ತು ಒಂದು ಶತಾಬ್ಧಿ ರೈಲಿನ ಜೊತೆಗೆ ಎಂಜಿನ್‌ನ ಸಂಚಾರ ಪರೀಕ್ಷೆ ನಡೆಸಲಾಯಿತು. ಅಪಘಾತದ ಸ್ಥಳವಾದ್ದರಿಂದ, ಸ್ವಲ್ಪ ಎಚ್ಚರಿಕೆಯಿಂದ ಪ್ರಯೋಗ ಮಾಡಲಾಯಿತು. ಅದರ ಪಕ್ಕದಲ್ಲಿರುವ ಲೈನ್ ಅನ್ನು ಸಹ ಪುನಃ ಸ್ಥಾಪಿಸಲಾಗುತ್ತದೆ.
ಇದರ ಮಧ್ಯೆ, ಮರುಸ್ಥಾಪನೆ ಕಾರ್ಯ ಪೂರ್ಣಗೊಂಡ ಬಳಿಕ ಇಂದು ಮುಂಜಾನೆ ಕಾಂಚನಜುಂಗಾ ಎಕ್ಸ್‌ಪ್ರೆಸ್ ತನ್ನ ಗಮ್ಯಸ್ಥಾನ ಕಲ್ಕತ್ತಾದ ಸೀಲ್ದಾಗೆ ಆಗಮಿಸಿದೆ. ಸೋಮವಾರ ಬೆಳಗ್ಗೆ 8.55ರ ಸುಮಾರಿಗೆ ಉತ್ತರ ಬಂಗಾಳದ ಜಲ್ಪೈಗುರಿ ನಿಲ್ದಾಣದ ಬಳಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ಪ್ರಯಾಣಿಕರ ರೈಲಿಗೆ, ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದ ಕಾರಣ ರೈಲಿನಲ್ಲಿದ್ದ 8 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ:'ಕವಚ' ಇಲ್ಲದೇ ಗುದ್ದಿಕೊಂಡ ರೈಲುಗಳು: ಸುರಕ್ಷತಾ ವ್ಯವಸ್ಥೆ ವಿಸ್ತರಣೆಗೆ ಹೆಚ್ಚಿದ ಬೇಡಿಕೆ - Bengal Train Accident