ಭೋಪಾಲ್(ಮಧ್ಯಪ್ರದೇಶ):ಮಧ್ಯಪ್ರದೇಶದ ಮಾಜಿ ಸಿಎಂ ಮತ್ತು ಹಿರಿಯ ಕಾಂಗ್ರೆಸ್ಸಿಗ ಕಮಲ್ ನಾಥ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಲು ಉತ್ಸುಕರಾಗಿದ್ದಾರೆ ಎಂಬ ವರದಿಗಳ ನಡುವೆ ಅವರು, ಕಾಂಗ್ರೆಸ್ ಸಿದ್ಧಾಂತದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಶನಿವಾರ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದಾರೆ.
"ಕಾಂಗ್ರೆಸ್ ಸಿದ್ಧಾಂತವು ಸತ್ಯ, ಧರ್ಮ ಮತ್ತು ನ್ಯಾಯದ ಸಿದ್ಧಾಂತ. ದೇಶದ ಎಲ್ಲಾ ಧರ್ಮ, ಜಾತಿ, ಪ್ರದೇಶ, ಭಾಷೆ ಮತ್ತು ವಿಚಾರಗಳಿಗೆ ಪಕ್ಷದ ಸಿದ್ಧಾಂತದಲ್ಲಿ ಸಮಾನ ಸ್ಥಾನ ಮತ್ತು ಗೌರವವಿದೆ. ಪಕ್ಷವು ತನ್ನ 138 ವರ್ಷಗಳ ಇತಿಹಾಸದಲ್ಲಿ ದೇಶಕ್ಕಾಗಿ ಹೋರಾಟ ಮತ್ತು ಸೇವೆಯಲ್ಲಿಯೇ ಹೆಚ್ಚಿನ ಸಮಯ ಕಳೆದಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶ ಸೇವೆಗಾಗಿ ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ಇತ್ತು. ಸ್ವಾತಂತ್ರ್ಯಾ ನಂತರ ರಾಷ್ಟ್ರ ನಿರ್ಮಾಣವೇ ಕಾಂಗ್ರೆಸ್‌ನ ಏಕೈಕ ಗುರಿ" ಎಂದು ಕಮಲ್ ನಾಥ್ ತಿಳಿಸಿದ್ದಾರೆ.
"ಕಾಂಗ್ರೆಸ್ ಮತ್ತು ಅದರ ಸಿದ್ಧಾಂತವು ಸರ್ವಾಧಿಕಾರವನ್ನು ವಿರೋಧಿಸುತ್ತದೆ. ದೇಶವನ್ನು ವಿಶ್ವದ ಅತ್ಯಂತ ಸುಂದರ ಮತ್ತು ಶಕ್ತಿಯುತವಾದ ಪ್ರಜಾಪ್ರಭುತ್ವವನ್ನಾಗಿ ಮಾಡುತ್ತದೆ. ಇಂದು ದೇಶದಲ್ಲಿ ಪ್ರತಿಪಕ್ಷಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಅದರ ಸಿದ್ಧಾಂತವು ಸರ್ವಾಧಿಕಾರದ ಧೋರಣೆಯನ್ನು ವಿರೋಧಿಸುತ್ತಿದೆ. ಮಹಾತ್ಮ ಗಾಂಧಿ, ಪಂಡಿತ್ ಜವಾಹರ್ ಲಾಲ್ ನೆಹರು ಮತ್ತು ಡಾ.ಭೀಮ್ ರಾವ್ ಅಂಬೇಡ್ಕರ್ ಅವರ ಮಾರ್ಗ ಅನುಸರಿಸುವ ಮೂಲಕ ಪಕ್ಷವು ಸುವರ್ಣ ಭಾರತದ ಚಿಂತನೆ ಮಾಡುತ್ತಿದೆ" ಎಂದಿದ್ದಾರೆ.