ರಾಂಚಿ (ಜಾಖಂಡ್): ಕೇಂದ್ರದ ತನಿಖೆ ಸಂಸ್ಥೆಯಾದ ಜಾರಿ ನಿರ್ದೇಶನಾಲಯದಿಂದ ಜೆಎಂಎಂ ನೇತೃತ್ವದ ಮೈತ್ರಿಕೂಟದ ನಾಯಕ ಹೇಮಂತ್ ಸೊರೆನ್ ಬಂಧನಕ್ಕೊಳಗಾದ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಬುಧವಾರ ಜೆಎಂಎಂ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಚಂಪೈ ಸೊರೆನ್ ಅವರನ್ನು ಆಯ್ಕೆ ಮಾಡಿ, ಅವರನ್ನು ನೂತನ ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸಲಾಗಿದೆ. ಆದರೆ, ಇದುವರೆಗೂ ಪ್ರಮಾಣ ವಚನ ಸ್ವೀಕಾರ ಮಾಡಲು ಸಾಧ್ಯವಾಗಿಲ್ಲ. ಇದರ ನಡುವೆ ಮೈತ್ರಿಕೂಟದ ಸುಮಾರು 43 ಶಾಸಕರನ್ನು ಹೈದರಾಬಾದ್‌ಗೆ ಸ್ಥಳಾಂತರಿಸುವ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.
ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಆಗಿದ್ದ ಹೇಮಂತ್ ಸೊರೆನ್ ಅವರನ್ನು ಇಡಿ ಬುಧವಾರ ಬಂಧಿಸಿದೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆಗೆ ಚಂಪೈ ಸೊರೆನ್ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಸಂಜೆ ಚಂಪೈ ಅವರು ಜೆಎಂಎಂ-ಕಾಂಗ್ರೆಸ್ ಸೇರಿ ತಮ್ಮ ಮೈತ್ರಿಕೂಟದ 43 ಶಾಸಕರೊಂದಿಗೆ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚಿರುವ ಪ್ರಸ್ತಾವ ಮಂಡಿಸಿದರು.
ರಾಜ್ಯಪಾಲರ ಭೇಟಿಯ ನಂತರ ಚಂಪೈ ಸೊರೆನ್ ಮಾತನಾಡಿ, ಆದಷ್ಟು ಬೇಗ ಸರ್ಕಾರ ರಚಿಸುವ ಜೆಎಂಎಂ ನೇತೃತ್ವದ ಮೈತ್ರಿಕೂಟದ ನಿಯೋಗದ ಹಕ್ಕನ್ನು ಅಂಗೀಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ. ಜಾರ್ಖಂಡ್‌ನಲ್ಲಿ 20 ಗಂಟೆಗಳು ಕಳೆದರೂ ಯಾವುದೇ ಸರ್ಕಾರ ಇಲ್ಲವಾಗಿದೆ. ಬೇಗ ತೀರ್ಮಾನ ತೆಗೆದುಕೊಳ್ಳುವಂತೆ ವಿನಂತಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ, ಸದ್ಯ ನಾವು 43 ಶಾಸಕರ ಬೆಂಬಲದೊಂದಿಗೆ ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದೇವೆ. ನಮ್ಮ ಸಂಖ್ಯೆ 46ರಿಂದ 47ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಆದ್ದರಿಂದ ನಮಗೆ ಯಾವುದೇ ತೊಂದರೆ ಇಲ್ಲ. ನಮ್ಮ ಮೈತ್ರಿಕೂಟ ತುಂಬಾ ಪ್ರಬಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮತ್ತೊಂದೆಡೆ, ಜೆಎಂಎಂ ನೇತೃತ್ವದ ಮೈತ್ರಿಕೂಟದ ಶಾಸಕರನ್ನು ಹೈದರಾಬಾದ್‌ಗೆ ಕರೆದೊಯ್ಯಲು ಎರಡು ಚಾರ್ಟರ್ಡ್ ವಿಮಾನಗಳು ರಾಂಚಿ ವಿಮಾನ ನಿಲ್ದಾಣದಲ್ಲಿ ಸಿದ್ಧವಾಗಿವೆ ಎಂದು ಮೂಲಗಳು ತಿಳಿಸಿವೆ.