ರಾಂಚಿ(ಜಾರ್ಖಂಡ್):ರಾಜ್ಯದಾದ್ಯಂತ ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾರ್ಖಂಡ್ ಸರ್ಕಾರ ಮಂಗಳವಾರದಿಂದ ಅಂಗನವಾಡಿಯಿಂದ ಹಿಡಿದು 8ನೇ ತರಗತಿವರೆಗಿನ ತರಗತಿಗಳನ್ನು ಸ್ಥಗಿತಗೊಳಿಸಿ ಆದೇಶ ನೀಡಿದೆ. ಬೆಳಗಿನ ಪ್ರಾರ್ಥನೆ, ಕ್ರೀಡೆ ಮತ್ತು ಇತರ ಚಟುವಟಿಕೆಗಳನ್ನು ಹೊರತುಪಡಿಸಿ 9 ರಿಂದ 12ನೇ ತರಗತಿಗಳು ಬೆಳಿಗ್ಗೆ 7 ರಿಂದ 11.30 ರವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಇಲಾಖೆ ಮಾಹಿತಿ ನೀಡಿದೆ.
ಬಿಸಿಗಾಳಿ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರಿ, ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಸೇರಿದಂತೆ ಎಲ್ಲಾ ರೀತಿಯ ಶಾಲೆಗಳಿಗೂ ಈ ಆದೇಶ ಅನ್ವಯಿಸುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಉಮಾ ಶಂಕರ್ ಸಿಂಗ್ ತಿಳಿಸಿದ್ದಾರೆ.
ಸರ್ಕಾರಿ, ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಸೇರಿದಂತೆ ಎಲ್ಲಾ ವರ್ಗದ ಶಾಲೆಗಳಲ್ಲಿ ಶಿಶುವಿಹಾರದಿಂದ 8 ನೇ ತರಗತಿವರೆಗಿನ ತರಗತಿಗಳನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಿದೆ. ಈ ಆದೇಶವು ಏಪ್ರಿಲ್ 30ರಿಂದ ಜಾರಿಯಾಗಲಿದೆ. ಆದರೆ, ಸರ್ಕಾರಿ, ಸರಕಾರೇತರ ಅನುದಾನಿತ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಇದು ಅನ್ವಯಿಸುವುದಿಲ್ಲ. ಶಿಕ್ಷಕರು ಮತ್ತು ಬೋಧಕೇತರರಿಗೆ ಬೇಸಿಗೆ ರಜೆ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು. ನಿಗದಿತ ಸಮಯದಲ್ಲಿ ಪ್ರತಿದಿನ ಶಾಲೆಗೆ ಸಿಬ್ಬಂದಿ ಹಾಜರಾಗಬೇಕು ಎಂದು ಅವರು ಹೇಳಿದರು.
ಬೊಕಾರೊ, ಧನ್‌ಬಾದ್, ಜಮ್ತಾರಾ, ದಿಯೋಘರ್, ದುಮ್ಕಾ, ಪಾಕುರ್, ಗೊಡ್ಡಾ, ಸಾಹಿಬ್‌ಗಂಜ್, ಸೆರೈಕೆಲಾ-ಖಾರ್ಸ್ವಾನ್ ಮತ್ತು ಪೂರ್ವ ಮತ್ತು ಪಶ್ಚಿಮ ಸಿಂಗ್‌ಭೂಮ್‌ನಲ್ಲಿ ಸೋಮವಾರ ಅಧಿಕ ಬಿಸಿಗಾಳಿ ದಾಖಲಾಗಿದೆ. ಸೆರೈಕೆಲಾ (45.1. ಡಿಗ್ರಿ ಸೆಲ್ಸಿಯಸ್)ದಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ನಂತರ ಕ್ರಮವಾಗಿ ಗೊಡ್ಡಾ 44.6, ಜೆಮ್‌ಶೆಡ್‌ಪುರ 44 ಮತ್ತು ಡಾಲ್ಟೊಂಗಂಜ್ 43.8 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ರಾಜ್ಯದ ರಾಜಧಾನಿ ರಾಂಚಿಯಲ್ಲಿ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ರಾಜ್ಯದ 18 ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ - Heatwave Alert