ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಕಳೆದ ತಿಂಗಳು ಜಮ್ಮುವಿನ ಚೆನಾಬ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನೋರ್ವನ ಮೃತದೇಹ ಪಾಕಿಸ್ತಾನಕ್ಕೆ ಹರಿದುಕೊಂಡು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಪಾಕಿಸ್ತಾನದ ಅಧಿಕಾರಿಗಳು ಆತನ ಮೃತದೇಹವನ್ನು ಹೂಳುವ ಮೂಲಕ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈಗ ವಿಧಿ ವಿಧಾನಗಳ ಮೂಲಕ ಅಂತಿಮ ಕಾರ್ಯಕ್ಕಾಗಿ ಪಾರ್ಥಿವ ಶರೀರವನ್ನು ತವರಿಗೆ ತರಲು ನೆರವಾಗುವಂತೆ ಕೇಂದ್ರ ಸರ್ಕಾರಕ್ಕೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಜಮ್ಮು ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಅಖ್ನೂರ್‌ನ ಜುರಿಯನ್ ಪ್ರದೇಶದ ನಿವಾಸಿ ಹರಶ್ ನಗೋತ್ರಾ ಮೃತನೆಂದು ಗುರುತಿಸಲಾಗಿದೆ. ಜೂನ್ 11ರಂದು ಯುವಕ ನಾಪತ್ತೆಯಾಗಿದ್ದ. ನದಿಯ ದಡದಲ್ಲಿ ಬೈಕ್ ಪತ್ತೆಯಾಗಿತ್ತು. ಮರು ದಿನ ಕುಟುಂಬಸ್ಥರು ಹರಶ್ ಕಾಣೆಯಾದ ಬಗ್ಗೆ ಜುರಿಯನ್ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪ್ರಕರಣವನ್ನು ತನಿಖೆಗಾಗಿ ಖೌರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ 80 ಸಾವಿರ ರೂ.ಗೂ ಹೆಚ್ಚು ನಷ್ಟ ಅನುಭವಿಸಿದ್ದರಿಂದ ಹರಶ್ ನದಿಗೆ ಹಾರಿದ್ದ ಎಂಬುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ವಾಟ್ಸಾಪ್ ನಂಬರ್ಗೆ ಬಂತು ಪಾಕ್ ಸಂದೇಶ:ಇದೀಗ ಸುಮಾರು ಒಂದು ತಿಂಗಳ ನಂತರ ಪಾಕಿಸ್ತಾನಿ ಅಧಿಕಾರಿಯೊಬ್ಬರು ಹರಶ್ ತಂದೆ ಸುಭಾಷ್ ಶರ್ಮಾ ಅವರಿಗೆ ವಾಟ್ಸಾಪ್ ನಂಬರ್ಗೆ ಸಾವಿನ ಬಗ್ಗೆ ಸಂದೇಶ ರವಾನಿಸಿದ್ದರು. ಹರಶ್ ಈ ವಾಟ್ಸಾಪ್ ನಂಬರ್ ಬಳಸುತ್ತಿದ್ದ. ಬಳಿಕ ಕುಟುಂಬದವರು ಈ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿ, ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರು. ಇದೇ ನಂಬರ್ಗೆ ಸಂದೇಶ ಕಳುಹಿಸಿರುವ ಪಾಕ್ ಅಧಿಕಾರಿ ತಾನು ಮರಣೋತ್ತರ ಪರೀಕ್ಷೆಯ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿದ್ದೇನೆ. ಜೂನ್ 13ರಂದು ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನ ಕಾಲುವೆಯಲ್ಲಿ ಹರಶ್‌ನ ದೇಹ ಪತ್ತೆಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.