ಜಮ್ಮು:ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ರೈಲು ಸೇವೆ ಒದಗಿಸುವ ಕನಸಿನ ಯೋಜನೆಗೆ ಭಾರತೀಯ ರೈಲ್ವೆ ಸಿದ್ಧತೆ ನಡೆಸುತ್ತಿದ್ದು, ಅಂತಿಮ ಘಟ್ಟದಲ್ಲಿದೆ. ಆದರೆ, ಇದು ಇಲ್ಲಿನ ವರ್ತಕರಲ್ಲಿ ವ್ಯಾಪಾರ ನಷ್ಟದ ಭಯ ಉಂಟು ಮಾಡಿದೆ. ಈ ಕುರಿತು ಮಾತನಾಡಿರುವ ವರ್ತಕರು, ಕಾಶ್ಮೀರಕ್ಕೆ ನೇರ ರೈಲು ಸೇವೆ ಬಂದಲ್ಲಿ ಉದ್ಯಮ ವಲಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಸಾರಿಗೆ ಸೇವೆದಾರರು ಹೆಚ್ಚು ನಷ್ಟಕ್ಕೆ ಒಳಗಾಗಲಿದ್ದಾರೆ ಎಂದಿದ್ದಾರೆ.
ಕಾಶ್ಮೀರಕ್ಕೆ ಒಮ್ಮೆ ರೈಲು ಸೇವೆ ಆರಂಭವಾದರೆ, ಬಹುತೇಕ ಉತ್ಪಾದನೆಗಳು ವಿಶೇಷವಾಗಿ ಇಂಧನ ಮತ್ತು ಗ್ಯಾಸ್ ಟ್ರೈನ್ ಮೂಲಕವೇ ಬರಲಿದೆ. ಇದರಿಂದ ವೆಚ್ಚ ಕಡಿತಗೊಂಡು, ಅಗ್ಗದ ದರದಲ್ಲಿ ಕಣಿವೆ ಜನರು ಉತ್ಪನ್ನಗಳನ್ನು ಕೊಳ್ಳಬಹುದು. ಆದರೆ, ಇದೇ ಸಮಯದಲ್ಲಿ ಹೆದ್ದಾರಿ ಸಂಚಾರದ ಟ್ರಕ್‌ಗಳು ಮತ್ತು ಆಯಿಲ್ ಟ್ಯಾಂಕರ್ಗಳಿಗೆ ದೊಡ್ಡ ನಷ್ಟವಾಗಲಿದೆ. ಕಾಶ್ಮೀರಕ್ಕೆ ಬಹುತೇಕ ಉತ್ಪನ್ನಗಳು ರೈಲು ಸೇವೆ ಮೂಲಕ ದೇಶದ ಇತರ ಭಾಗಗಳಿಂದ ನೇರವಾಗಿ ಲಭ್ಯವಾಗಲಿದ್ದು, ಸಾರಿಗೆ ಮೇಲಿನ ಅವಲಂಬನೆ ನಿಲ್ಲುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಸಾರಿಗೆದಾರರು ತಿಳಿಸಿದ್ದಾರೆ.
ಸದ್ಯಕ್ಕೆ ಪ್ರಮುಖ ವಸ್ತುಗಳಾದ, ದಿನಸಿ, ಇಂಧನ, ಪಾತ್ರೆಗಳು, ಸರಕುಗಳು, ಹಣ್ಣುಗಳು ಮತ್ತು ಇತರ ವಸ್ತುಗಳ ಸರಬರಾಜನ್ನು ವಾಣಿಜ್ಯ ವಾಹನಗಳು ಮತ್ತು ಟ್ರಕ್‌ಗಳು ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿ - 44ರ ಮೂಲಕ ಕಾಶ್ಮೀರಕ್ಕೆ ಸರಬರಾಜು ಮಾಡುತ್ತಿದೆ. ಬೇಸಿಗೆ ಹೊರತಾಗಿ ಮೊಘಲ್ ರಸ್ತೆಯ ಮೂಲಕ ಈ ಸಂಚಾರ ಸಾಗುತ್ತದೆ.
ಸಾರಿಗೆ ನಷ್ಟದ ಚಿಂತೆ: ಈ ಕುರಿತು ಈ ಟಿವಿ ಭಾರತ್ನೊಂದಿಗೆ ಮಾತನಾಡಿರುವ ಜಮ್ಮು ಸಾರಿಗೆ ಅಸೋಸಿಯೇಷನ್ ಅಧ್ಯಕ್ಷ ಅಜಿತ್ ಸಿಂಗ್, ರೈಲು ಸೇವೆಯಿಂದ ಕಾಶ್ಮೀರದ ಜನರು ಮತ್ತು ಪ್ರವಾಸಿಗರಿಗೆ ಲಾಭವಾಗಲಿದೆ. ಕಣಿವೆ ರಾಜ್ಯಕ್ಕೆ ತಲುಪುವ ಮಾರ್ಗವೂ ಸುಲಭವಾಗಲಿದೆ. ಆದರೆ, ಇದೇ ವೇಳೆ ಸಾರಿಗೆ ಉದ್ಯಮ ನಷ್ಟ ಹೊಂದುವ ಭಯ ಎದುರಾಗಿದೆ. ಅದರಲ್ಲೂ ಆಯಿಲ್ ಟ್ಯಾಂಕರ್ ನಷ್ಟ ಹೆಚ್ಚಿದೆ. ಇವು ಕಾಶ್ಮೀರಕ್ಕೆ ಇಂಧನ ಮತ್ತು ಗ್ಯಾಸ್ ಸೇವೆಯಲ್ಲಿ ಇವು ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿವೆ. ಕಳೆದ 10 ರಿಂದ 15 ವರ್ಷದಲ್ಲಿ ಸಾರಿಗೆ ಉದ್ಯಮವೂ ಕುಗ್ಗುತ್ತಿದೆ. ಇದೀಗ ರೈಲು ಸೇವೆ ಆರಂಭವಾದಲ್ಲಿ ಶವಪೆಟ್ಟಿಗೆ ಮೇಲೆ ಕೊನೆ ಮೊಳೆ ಹೊಡೆದಂತೆ ಆಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ರೈಲು ಸೇವೆಯಿಂದಾಗಿ ವಾಣಿಜ್ಯ ಪ್ರಯಾಣಿಕರ ಭಾರೀ ನಷ್ಟವಾಗಲಿದೆ. ಪ್ರವಾಸಿಗರು ಇತರರು ಬಳಕೆ ಮಾಡುವ ವಾಹನದಿಂದ ಇಲ್ಲಿನ ಸಾರಿಗೆಯವರ ಹೊಟ್ಟೆ ತುಂಬುತ್ತಿದೆ. ಒಮ್ಮೆ ರೈಲು ಸೇವೆ ಆರಂಭವಾದರೆ, ಎಲ್ಲಾ ವಾಹನಗಳು ನಷ್ಟಹೊಂದುತ್ತದೆ ಎಂದರು.
ಕಾಶ್ಮೀರಕ್ಕೆ ರೈಲು ಸೇವೆ ಆರಂಭದ ದಿನ ಹತ್ತಿರವಾಗುತ್ತಿದ್ದು, ಸಾರಿಗೆ ಸಿಬ್ಬಂದಿ ಈ ಕುರಿತು ಯಾವುದೇ ಪರಿಹಾರ ಕಾಣದ ಹಿನ್ನೆಲೆ ಪ್ರತಿಭಟನೆ ನಡೆಸುವ ಸಂಬಂಧ ಸಭೆ ನಡೆಸಿದ್ದಾರೆ. ಈಗಾಗಲೇ ಈ ಸಮಸ್ಯೆ ಕುರಿತು ಸರ್ಕಾರಕ್ಕೆ ಪತ್ರ ಬರೆದು, ಮನವಿ ಮಾಡಲಾಗಿದೆ. ಆದರೂ, ಏನು ಮಾಡುವುದು ಎಂದು ತೋಚುತ್ತಿಲ್ಲ. ಲೆಫ್ಟಿನೆಂಟ್ ಗವರ್ನರ್ ಮತ್ತು ಭಾರತ ಸರ್ಕಾರಕ್ಕೆ ಕೂಡ ಇಲ್ಲಿನ ಸಾರಿಗೆ ಪುನರುಜ್ಜೀವನ ನಡೆಸುವ ಸಂಬಂಧ ಪತ್ರ ಬರೆಯಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.
ಜಮ್ಮುವಿನ ಉಗ್ರಾಣದ ಉದ್ಯಮದ ಮೇಲೂ ಪರಿಣಾಮ: ಜಮ್ಮು ಮತ್ತು ಕಾಶ್ಮೀರದ ನಡುವೆ ಪ್ರಮುಖ ಪೂರೈಕೆ ಎಂದರೆ ಅದು ಪಡಿತರ (ದಿನಸಿ)ಯಾಗಿದೆ. ಜಮ್ಮುನಲ್ಲಿರುವ ಉಗ್ರಾಣಗಳಿಗೆ ಇವು ಸೇರುತ್ತದೆ. ಆದರೆ, ಕಳೆದ 10 ರಿಂದ 15 ವರ್ಷದಲ್ಲಿ ಕಾಶ್ಮೀರ ವ್ಯಾಪಾರಿಗಳು ಪಂಜಾಬ್ ಮತ್ತು ದೇಶದ ಇತರ ಭಾಗಗಳಿಂದ ನೇರವಾಗಿ ಸರಕು ತರುತ್ತಿದ್ದಾರೆ. ಕೆಲವು ಸಣ್ಣ ವ್ಯಾಪಾರಿಗಳು ಮಾತ್ರ ಜಮ್ಮುವಿನಲ್ಲಿರುವ ಉಗ್ರಾಣದಿಂದ ತರುತ್ತಿದ್ದಾರೆ. ಆದರೆ, ಒಮ್ಮೆ ಕಾಶ್ಮೀರಕ್ಕೆ ರೈಲು ಸೇವೆ ಆರಂಭವಾದರೆ, ಸ್ಥಳೀಯ ವರ್ತಕರು ಜಮ್ಮು ಉದ್ಯಮಿಗಳು ಬದಲಾಯಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.