ಶ್ರೀನಗರ: ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗಿನಿಂದ ಮತದಾನ ನಡೆಯುತ್ತಿದೆ. ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಕೇಂದ್ರಾಡಳಿತ ಪ್ರದೇಶದ 7 ಜಿಲ್ಲೆಗಳಲ್ಲಿ ಹರಡಿರುವ ಒಟ್ಟು 24 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇಂದು ಬೆಳಗ್ಗೆ 7 ಗಂಟೆಯಿಂದಲೇ 24 ಕ್ಷೇತ್ರಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಕಂಡುಬಂತು. ಮತದಾನಕ್ಕಾಗಿ ಬಿಗಿ ಪೊಲೀಸ್ ಭದ್ರತೆ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
23 ಲಕ್ಷಕ್ಕೂ ಹೆಚ್ಚು ಮತದಾರರು ಕಣದಲ್ಲಿರುವ 219 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ. ಈ ಪೈಕಿ 90 ಮಂದಿ ಸ್ವತಂತ್ರ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಒಟ್ಟು 3 ಹಂತಗಳಲ್ಲಿ ಮತದಾನ ನಡೆಯಲಿದೆ. ಇಂದು ಮತದಾನ ನಡೆಯುತ್ತಿರುವ 7 ಜಿಲ್ಲೆಗಳು ಪೀರ್ ಪಾಂಜಲ್ ಪರ್ವತ ಶ್ರೇಣಿಯ ಎರಡೂ ಬದಿಗಳಲ್ಲಿವೆ.
ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಉಳಿದ 2 ಹಂತದ ಚುನಾವಣೆಗೆ ಸೆ.25 ಮತ್ತು ಅ.1ರಂದು ಮತದಾನ ನಡೆಯಲಿದೆ. ಅ.8ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರಬೀಳಲಿದೆ.
ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು ಕಾಶ್ಮೀರಕ್ಕಿದು ಮೊದಲ ವಿಧಾನಸಭಾ ಚುನಾವಣೆಯಾದರೆ, ಮತ್ತೊಂದೆಡೆ ಕಳೆದ 10 ವರ್ಷಗಳಲ್ಲಿ ನಡೆಯುತ್ತಿರುವ ಮೊದಲ ಚುನಾವಣೆಯೂ ಹೌದು. 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಲಾದ 370ನೇ ವಿಧಿ ರದ್ದುಗೊಳಿಸಿತ್ತು. ನಂತರ ಜಮ್ಮು ಕಾಶ್ಮೀರ ಮತ್ತು ಲಡಾಕ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿತ್ತು.
ಇದನ್ನೂ ಓದಿ:ಇಂದು ಕಾಶ್ಮೀರದಲ್ಲಿ ಮೊದಲ ಹಂತದ ಚುನಾವಣೆ: 24 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ - Phase 1 Of Kashmir Elections