ರಿಯಾಸಿ(ಜಮ್ಮು ಮತ್ತು ಕಾಶ್ಮೀರ):ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಯೋಜನೆಯ ಬಹುನಿರೀಕ್ಷಿತ ಚೆನಾಬ್ ಸೇತುವೆಯೂ ಸೇರಿದಂತೆ ಕತ್ರಾ-ಬನಿಹಾಲ್ ವಿಭಾಗದಲ್ಲಿ ಶನಿವಾರ ಭಾರತೀಯ ರೈಲ್ವೇ, ಪ್ರಾಯೋಗಿಕ ರೈಲು ಸಂಚಾರವನ್ನು ಯಶಸ್ವಿಯಾಗಿ ನಡೆಸಿತು. ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್‌ಎಸ್) ತಪಾಸಣೆಗೆ ಮುನ್ನ ಈ ಪರೀಕ್ಷೆ ನಡೆದಿದೆ.
ಭಾರತೀಯ ರೈಲ್ವೇಯ ಮುಖ್ಯ ಆಡಳಿತಾಧಿಕಾರಿ ಸಂದೀಪ್ ಗುಪ್ತಾ ಮಾತನಾಡಿ, "ಜ.7 ಮತ್ತು 8ರಂದು ರೈಲ್ವೇ ಸುರಕ್ಷತಾ ಆಯುಕ್ತರು ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ. ಕತ್ರಾ-ರಿಯಾಸಿ ವಿಭಾಗದ ಈ ತಪಾಸಣೆಯಲ್ಲಿ, ಬನಿಹಾಲ್‌ನಿಂದ ಕತ್ರಾಗೆ ರೈಲು ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ. ಇವತ್ತು ಬನಿಹಾಲ್‌ನಿಂದ ಕತ್ರಾ ಮತ್ತು ಕತ್ರಾದಿಂದ ಬನಿಹಾಲ್‌ಗೆ WAP 7 ಎಂಬ ಎಲೆಕ್ಟ್ರಿಕ್ ಲೋಕೋ ಮೂಲಕ ಪ್ರಾಯೋಗಿಕ ಸಂಚಾರ ನಡೆಸಲಾಯಿತು. ಪ್ರಾಯೋಗಿಕ ಸಂಚಾರಗಳು ನಡೆಯುತ್ತಿರುತ್ತವೆ. ರೈಲು ಸುರಕ್ಷತಾ ಆಯುಕ್ತರು ಜ.7 ಮತ್ತು 8ರಂದು ತಪಾಸಣೆ ನಡೆಸಿ ವರದಿ ನೀಡಲಿದ್ದಾರೆ. ಟ್ರ್ಯಾಕ್‌ಗಳನ್ನು ಜೋಡಿಸಲಾಗಿದೆ. ಎಲ್ಲ ಕೆಲಸಗಳೂ ಮುಗಿದಿವೆ" ಎಂದು ಹೇಳಿದರು.
ಪ್ರಾಯೋಗಿಕ ಸಂಚಾರದ ಉದ್ದೇಶವೇನು?:ಹಳಿಗಳ ಸ್ಥಿರತೆ, ಸಿಗ್ನಲಿಂಗ್ ವ್ಯವಸ್ಥೆಗಳು, ಸುರಕ್ಷತಾ ಮೂಲಸೌಕರ್ಯ ಹಾಗು ಒಟ್ಟಾರೆ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಲು ಪ್ರಾಯೋಗಿಕ ಸಂಚಾರವನ್ನು ನಡೆಸಲಾಗುತ್ತದೆ. ಪ್ರಾಯೋಗಿಕ ಸಂಚಾರದ ರೈಲು ಅತ್ಯಂತ ಸವಾಲಿನಿಂದ ಕೂಡಿರುವ ಕತ್ರಾ-ಬನಿಹಾಲ್ ಪ್ರದೇಶ, ಸುರಂಗಗಳು ಮತ್ತು ಕಣಿವೆಯನ್ನು ದಾಟಿಹೋಗಲು ಇರುವ ಎತ್ತರದ ಸೇತುವೆಗಳಲ್ಲಿ ದಕ್ಷತೆಯಿಂದ ಕ್ರಮಿಸಿದೆ.
ಕತ್ರಾ-ಬನಿಹಾಲ್ ರೈಲ್ವೇ ವಿಭಾಗ ಯುಎಸ್‌ಬಿಆರ್‌ಎಲ್ ಯೋಜನೆಯಲ್ಲಿ (USBRL Project) ಪ್ರಮುಖ ಕೊಂಡಿ. ಜಮ್ಮು-ಕಾಶ್ಮೀರ ಕಣಿವೆಯ ನಡುವಿನ ಪ್ರಯಾಣದ ಅಂತರವನ್ನು ಇದು ಕಡಿಮೆ ಮಾಡುತ್ತದೆ.