ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಸಾಂಬಾ ಸೆಕ್ಟರ್‌ನಲ್ಲಿ ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಒಳ ನುಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಗುಂಡಿಕ್ಕಿ ಬೇಟೆಯಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ನುಸುಳುಕೋರ ಬುಧವಾರ ತಡರಾತ್ರಿ ಸಾಂಬಾ ಸೆಕ್ಟರ್ನ ಬಾರ್ಡರ್ ಔಟ್ ಪೋಸ್ಟ್ ಖೋರಾ ಬಳಿ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿದ್ದುದನ್ನು ಬಿಎಸ್‌ಎಫ್ ಯೋಧರು ಗುರುತಿಸಿದ್ದರು. ನುಸುಳುಕೋರ ಬಿಎಸ್‌ಎಫ್ ಬೇಲಿಯನ್ನು ಸಮೀಪಿಸುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ಯಶಸ್ವಿಯಾಗಿ ತಡೆದಿವೆ. ಹಿರಿಯ ಬಿಎಸ್‌ಎಫ್ ಮತ್ತು ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಹೊರತೆಗೆಯುವ ಪ್ರಯತ್ನ ನಡೆಸಿದರು.
ಸ್ಥಳೀಯ ಪೊಲೀಸ್ ಅಂಕಿ ಅಂಶದ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ 2024ರ ಮೊದಲ ಏಳು ತಿಂಗಳಲ್ಲಿ 68 ಸಾವುಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 62 ಸಾವುಗಳು ವರದಿಯಾಗಿದ್ದು, ಈ ವರ್ಷ ಹೆಚ್ಚಳವಾಗಿದೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಗಮನಾರ್ಹವಾಗಿ ಕಡಿಮೆಯಾಗಿದೆ.