ನವದೆಹಲಿ:ಹೈದರಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ, ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕಾರದ ವೇಳೆ 'ಜೈ ಪ್ಯಾಲೆಸ್ಟೈನ್' ಎಂದು ಘೋಷಣೆ ಕೂಗಿದ ವಿವಾದದ ಬೆನ್ನಲ್ಲೇ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿಗೆ ಬುಧವಾರ ದೂರು ಸಲ್ಲಿಕೆಯಾಗಿದೆ.
ದೇಶದ ಸಂಸದರಾಗಿ ಇನ್ನೊಂದು ವಿದೇಶಿ ರಾಷ್ಟ್ರಕ್ಕೆ ವಿಧೇಯತೆ ತೋರುವುದು ಸಾಂವಿಧಾನಿಕ ಉಲ್ಲಂಘನೆಯಾಗಿದೆ. ಆದ್ದರಿಂದ ಅವರನ್ನು ತಕ್ಷಣವೇ ಸಂಸತ್ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ವಕೀಲ ಅಲೋಕ್ ಶ್ರೀವಾಸ್ತವ್ ಎಂಬವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಿದ್ದಾರೆ.
ಶ್ರೀವಾಸ್ತವ್ ಅವರು ಓವೈಸಿಯನ್ನು ಸಂಸದ ಸ್ಥಾನದಿಂದ ವಜಾ ಮಾಡಲು ಕೋರಿದ್ದಾರೆ. ಭಾರತದ ಸಂವಿಧಾನದ ಅನುಸಾರ ಶಪಥ ಮಾಡಿ ಪರದೇಶಕ್ಕೆ ವಿಧೇಯತೆ ತೋರುವುದು ಉಲ್ಲಂಘನೆ. ಅವರ ನಿಷ್ಠೆ ನಮ್ಮ ದೇಶಕ್ಕಲ್ಲದೇ, ಪರರಾಷ್ಟ್ರಕ್ಕಿದೆ. ಸಾರ್ವಜನಿಕವಾಗಿ ಸಂಸತ್ತಿನಲ್ಲಿ ಪ್ಯಾಲೆಸ್ಟೈನ್ ಪರ ಘೋಷಣೆ ಕೂಗಿದ ಓವೈಸಿ ವಿರುದ್ಧ ಸಂವಿಧಾನದ 102(ಡಿ) ವಿಧಿಯ ಪ್ರಕಾರ, ಪರರಾಷ್ಟ್ರಕ್ಕೆ ವಿಧೇಯತೆ, ನಿಷ್ಠೆ, ಬೆಂಬಲ ನೀಡಿದ ಆಧಾರದ ಮೇಲೆ ಕ್ರಮ ಜರುಗಿಸಿ ಎಂದು ಒತ್ತಾಯಿಸಿದ್ದಾರೆ.
ವಿವಾದವೇನು?:ಮಂಗಳವಾರ ಲೋಕಸಭೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರದ ವೇಳೆ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಯಾಗಿರುವ ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ, ಶಪಥದ ಬಳಿಕ ಜೈ ಭೀಮ್, ಜೈ ಮಿಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ಟೈನ್ ಎಂದು ಕೂಗಿದ್ದರು. ಇದನ್ನು ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸಿದರು. ಸಂಸತ್ತಿನಲ್ಲಿ ವಿದೇಶದ ಘೋಷಣೆ ಕೂಗುವುದನ್ನು ವಿರೋಧಿಸಿದರು. ಹಂಗಾಮಿ ಸ್ಪೀಕರ್ ಪ್ಯಾಲೆಸ್ಟೈನ್ ಪದವನ್ನು ಕಡತದಿಂದ ತೆಗೆದು ಹಾಕಲು ಸೂಚಿಸಿದರು.
ಇದನ್ನು ಸಮರ್ಥಿಸಿಕೊಂಡಿದ್ದ ಓವೈಸಿ, "ನಮಗೂ ಸಂವಿಧಾನದ ಬಗ್ಗೆ ಜ್ಞಾನವಿದೆ. ಬೇರೆ ದೇಶದ ಬಗ್ಗೆ ಘೋಷಣೆ ಕೂಗದಂತೆ ಯಾವ ನಿಯಮ ಹೇಳಿದೆ ಎಂದು ಪ್ರಶ್ನಿಸಿದ್ದರು. ಮಹಾತ್ಮ ಗಾಂಧಿಯವರು ಪ್ಯಾಲೆಸ್ಟೈನ್ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಮೊದಲು ತಿಳಿಯಿರಿ" ಎಂದಿದ್ದರು.
ಕಡತದಿಂದ ಪದ ತೆಗೆದುಹಾಕಿದ್ದಕ್ಕೆ ಪ್ರತಿಕ್ರಿಯಿಸಿ, "ನಾನು ಹೇಳಬೇಕು ಎಂದಿದ್ದನ್ನು ಸಂಸತ್ತಿನಲ್ಲಿ ಹೇಳಿಯಾಗಿದೆ. ಅದನ್ನು ಉಳಿಸಿದರೂ, ತೆಗೆದರೂ ಅಷ್ಟೇ. ದಾಳಿಗೆ ಒಳಗಾದವರ ಪರ ಧ್ವನಿ ಎತ್ತಿದ್ದೇನೆ" ಎಂದು ತಮ್ಮ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದರು.
ಇದನ್ನೂ ಓದಿ:ಸಂಸದನಾಗಿ ಪ್ರಮಾಣ ವಚನ ಕೈಗೊಳ್ಳುವ ವೇಳೆ 'ಜೈ ಪ್ಯಾಲೆಸ್ಟೈನ್' ಎಂದ ಓವೈಸಿ!- ವಿಡಿಯೋ - Owaisi Chant Jai Palestine