ಜುನಾಗಢ(ಗುಜರಾತ್):ದೊಡ್ಡ ದೊಡ್ಡ ಮಾಲ್ಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗಳಲ್ಲಿ ಕಲಾವಿದರು ವಿವಿಧ ವೇಷ ತೊಟ್ಟು ಜನರನ್ನು ರಂಜಿಸುವುದನ್ನು ನೀವು ಸಾಮಾನ್ಯವಾಗಿ ನೋಡಿರುತ್ತಿರಾ. ಆದರೆ, ಜುನಾಗಢದ ವ್ಯಕ್ತಿಯೊಬ್ಬರು ಮುಸಿಯಾನ ವೇಷ ತೊಟ್ಟು ಮದುವೆ ಮತ್ತು ಇತರ ಶುಭ ಸಮಾರಂಭಗಳಲ್ಲಿ ಜನರನ್ನು ರಂಜಿಸುತ್ತಾ ಮಂಕಿಮ್ಯಾನ್ ಎಂತಲೇ ಖ್ಯಾತರಾಗಿದ್ದಾರೆ.
ಹೌದು, ಜುನಾಗಢ ಹಿತೇಶ್ ವಾಧ್ವಾನಿ (ಜಾಕಿ ವಾಧ್ವಾನಿ)10 ವರ್ಷಗಳ ಹಿಂದೆ ಗೆಳೆಯರೊಬ್ಬರ ಸಲಹೆಯಂತೆ ರಥಯಾತ್ರೆಯಲ್ಲಿ ಮೊದಲ ಬಾರಿಗೆ ಮುಸಿಯಾ ವೇಷ ತೊಟ್ಟು, ನೈಜ ಮುಸಿಯಾಂತೆ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು. ಅಂದಿನಿಂದ ಇದನ್ನೇ ವೃತ್ತಿಯಾಗಿಸಿಕೊಂಡು ಇದೀಗ ಮಂಕಿಮ್ಯಾನ್ ಆಗಿ ಹೆಸರುವಾಸಿಯಾಗಿದ್ದಾರೆ. ಹಿತೇಶ್ ವಾಧ್ವಾನಿ ಗುಜರಾತ್ ಮಾತ್ರವಲ್ಲದೇ ಇತರ ರಾಜ್ಯಗಳಿಗೂ ತೆರಳಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ.
ಹಿತೇಶ್ ವಾಧ್ವಾನಿ 8ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದು, ಜುನಾಗಢದಲ್ಲಿ ಹಣ್ಣು ವ್ಯಾಪಾರ ಮಾಡುವ ಜೊತೆ ಜೊತೆಗೆ ಕಳೆದ 10 ವರ್ಷಗಳಿಂದ ಮುಸಿಯಾ ವೇಷ ತೊಟ್ಟು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನರನ್ನು ರಂಜಿಸುತ್ತಿದ್ದಾರೆ. ಇವರನ್ನು ಮದುವೆ ಮತ್ತು ಇತರ ಶುಭ ಸಮಾರಂಭಗಳಿಗೂ ಆಹ್ವಾನಿಸಲಾಗುತ್ತಿದ್ದು, ಮುಸಿಯಾನಂತೆ ಹಾವಭಾವಗಳನ್ನು ಪ್ರದರ್ಶಿಸಿ ಜನರನ್ನು ಖುಷಿ ಪಡಿಸುತ್ತಿದ್ದಾರೆ. ಮುಸಿಯಾ ವೇಷವೇ ಹಿತೇಶ್ ವಾಧ್ವಾನಿ ಕುಟುಂಬಕ್ಕೆ ಪ್ರಮುಖ ಆದಾಯದ ಮೂಲವಾಗಿದೆ.
ಹಿತೇಶ್ ಹೇಳುವುದೇನು? :ಹಿತೇಶ್ ವಾಧ್ವಾನಿ 'ಈಟಿವಿ ಭಾರತ್' ಜೊತೆಗೆ ಮಾತನಾಡಿ, "ನಾನು 10 ವರ್ಷಗಳ ಹಿಂದೆ ಜುನಾಗಢದಲ್ಲಿ ಹಣ್ಣಿನ ವ್ಯಾಪಾರಿ ಮಾಡುತ್ತಾ ದಿನಕ್ಕೆ 300 ರೂಪಾಯಿ ಸಂಪಾದಿಸುತ್ತಾ ಕುಟುಂಬವನ್ನು ನಿರ್ವಹಿಸುತ್ತಿದ್ದೆ. ಕೆಲವು ಸಲ ದಿನಕ್ಕೆ ಕೇವಲ 200 ರೂಪಾಯಿ ಮಾತ್ರ ಸಿಗುತ್ತಿತ್ತು. ಈ ವೇಳೆ ತುಂಬಾ ದುಃಖಿತನಾಗುತ್ತಿದ್ದೆ. ಹೀಗಾಗಿ ಹೆಚ್ಚು ಹಣ ಗಳಿಸುವ ಸಲುವಾಗಿ ಸ್ನೇಹಿತನ ಬಳಿ ಏನಾದರೂ ಸಲಹೆ ಕೊಡುವಂತೆ ಕೇಳಿದೆ. ನನ್ನ ಸ್ನೇಹಿತ, ಮುಸಿಯಾ ವೇಷ ತೊಟ್ಟು ಜನರನ್ನು ರಂಜಿಸುವಂತೆ ನನಗೆ ಸಲಹೆ ಕೊಟ್ಟ. ಆ ಒಂದು ಸಲಹೆ ನನಗೆ ಇಂದು ಮಂಕಿಮ್ಯಾನ್" ಎಂಬ ಖ್ಯಾತಿಯನ್ನು ತಂದುಕೊಟ್ಟಿದೆ.