ರಿಯಾಸಿ (ಜಮ್ಮು ಮತ್ತು ಕಾಶ್ಮೀರ): ಶಿವ ಖೋರಿಯಿಂದ ಬರುತ್ತಿದ್ದ ಬಸ್‌ನ ಮೇಲೆ ಭಾನುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತ್ತು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಭಾರತೀಯ ಸೇನೆಯು ಸೋಮವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಹ ರಿಯಾಸಿಗೆ ಆಗಮಿಸಿದೆ. ಘಟನಾ ಸ್ಥಳ ಮತ್ತು ಸುತ್ತಮುತ್ತಲಿನ ದಟ್ಟ ಅರಣ್ಯ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯಲ್ಲಿ ಡ್ರೋನ್‌ಗಳನ್ನು ಸಹ ಬಳಸಲಾಗುತ್ತಿದೆ.
ಘಟನೆ ಬಗ್ಗೆ ಡಿಸಿ ಮಾಹಿತಿ ನೀಡಿದ್ದಿಷ್ಟು: ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 33 ಮಂದಿ ಗಾಯಗೊಂಡಿದ್ದಾರೆ ಎಂದು ರಿಯಾಸಿ ಜಿಲ್ಲಾಧಿಕಾರಿ ವಿಶೇಷ್ ಮಹಾಜನ್ ಭಾನುವಾರ ರಾತ್ರಿ ದೃಢಪಡಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಶಿವ ಖೋರಿ ದೇಗುಲದಿಂದ ಕತ್ರಾಕ್ಕೆ ತೆರಳುತ್ತಿದ್ದ ಬಸ್, ರಜೌರಿ ಜಿಲ್ಲೆಯ ಗಡಿಯಲ್ಲಿರುವ ರಿಯಾಸಿ ಜಿಲ್ಲೆಯ ಪೌನಿ ಪ್ರದೇಶವನ್ನು ತಲುಪಿದಾಗ ಸಂಜೆ 6.10ರ ಸುಮಾರಿಗೆ ಭಯೋತ್ಪಾದಕರ ದಾಳಿಗೆ ಒಳಗಾಗಿದೆ.
ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಿಷ್ಟು:"ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಗಾಯಾಳುಗಳನ್ನು ನರೈನಾ ಮತ್ತು ರಿಯಾಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರ ಗುರುತುಗಳನ್ನು ದೃಢೀಕರಿಸಲಾಗಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ, ಅವರು ಉತ್ತರ ಪ್ರದೇಶಕ್ಕೆ ಸೇರಿದವರು ಎಂಬುಂದು ತಿಳಿದಿದೆ" ಎಂದು ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮೋಹಿತಾ ಶರ್ಮಾ ತಿಳಿಸಿದ್ದಾರೆ.
ದಾಳಿ ಖಂಡಿಸಿದ ಲೆಫ್ಟಿನೆಂಟ್ ಗವರ್ನರ್ :ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಈ ದಾಳಿಯ ಇದರ ಹಿಂದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. "ರಿಯಾಸಿಯಲ್ಲಿ ಬಸ್ ಮೇಲೆ ನಡೆದ ಭಯೋತ್ಪಾದನಾ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಹುತಾತ್ಮ ನಾಗರಿಕರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸುತ್ತೇನೆ. ನಮ್ಮ ಭದ್ರತಾ ಪಡೆಗಳು ಮತ್ತು JKP ಭಯೋತ್ಪಾದಕರನ್ನು ಸೆರೆ ಹಿಡಿಯಲು ಜಂಟಿ ಕಾರ್ಯಾಚರಣೆ ಪ್ರಾರಂಭಿಸಿವೆ" ಎಂದು ಮನೋಜ್ ಸಿನ್ಹಾ ಎಕ್ಸ್ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.