ಶ್ರೀನಗರ: ಕಣಿವೆನಾಡು ಜಮ್ಮು ಮತ್ತು ಕಾಶ್ಮೀರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಬುಧವಾರ ಸಂಜೆ ಇಲ್ಲಿಗೆ ಬಂದಿಳಿದಿದ್ದಾರೆ. ವಿಶೇಷ ಎಂದರೆ, ಕಳೆದ 40 ದಿನಗಳಲ್ಲಿ ಇಲ್ಲಿಗೆ ದೇವೇಗೌಡ ಅವರ ಎರಡನೇ ಪ್ರವಾಸ ಇದಾಗಿದೆ. ದಶಕಗಳ ಬಳಿಕ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಗೆಲವಿನ ಬಳಿಕ ಸರ್ಕಾರ ರಚನೆಗೆ ಸಜ್ಜಾಗಿದ್ದು, ಈ ನಡುವೆ ಅವರ ಆಗಮನ ರಾಜಕೀಯದಲ್ಲಿ ಹಲವು ಕುತೂಹಲಕ್ಕೆ ಕಾರಣವಾಗಿದೆ.
ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದಿಳಿದ ದೇವೇಗೌಡ ಅವರನ್ನು ಮಾಜಿ ಸಿಎಂ ಮತ್ತು ಎನ್ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಆತ್ಮೀಯವಾಗಿ ಸ್ವಾಗತ ಕೋರಿದರು. ಚುನಾವಣೆಯಲ್ಲಿ ಎನ್ಸಿ ಅಭೂತಪೂರ್ವ ಯಶಸ್ಸಿಗೆ ವೈಯಕ್ತಿಕವಾಗಿ ಡಾ ಫಾರೂಕ್ ಅವರಿಗೆ ಶುಭಕೋರುವ ಉದ್ದೇಶದಿಂದ ಮಾಜಿ ಪ್ರಧಾನಿ ಅವರು ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದೆರಡು ದಿನದ ಹಿಂದೆ ಹೊರ ಬಿದ್ದ ಚುನಾವಣಾ ಫಲಿತಾಂಶದಲ್ಲಿ 90 ವಿಧಾನಸಭಾ ಕ್ಷೇತ್ರಗಳ ಪೈಕಿ ಎನ್ಸಿ 42 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ದೇವೇಗೌಡ ಅವರು ನೆಲೆಸಿರುವ ತಾಜ್ ವಿವಾಂಟಾ ಹೋಟೆಲ್ನಲ್ಲಿ ಇಬ್ಬರು ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬುಧವಾರ ಸಂಜೆ ನಡೆದ ಸಭೆಯಲ್ಲಿ ಅವರು ಅನೇಕ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ್ದು, ಈ ವಿಚಾರಗಳು ಬಹಿರಂಗಗೊಂಡಿಲ್ಲ. ಈ ನಡುವೆ ಡಾ ಫಾರೂಕ್ ಅವರಿಗೆ ಶುಭಾಶಯ ಕೋರುವ ಉದ್ದೇಶದಿಂದಲೇ ಅವರು ಆಗಮಿಸಿದ್ದಾರೆ ಎಂದು ದೃಢಪಟ್ಟರೂ ಅವರ ಪ್ರವಾಸದ ವೇಳಾಪಟ್ಟಿ ಇನ್ನೂ ಸ್ಪಷ್ಟವಾಗಿಲ್ಲ. ಇಂದು ರಾತ್ರಿ ವಾಸ್ತವ್ಯದ ವೇಳೆ ಅವರು ಅನೇಕ ರಾಜಕೀಯ ಮುಖಂಡರನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.