ಕೋಲ್ಕತ್ತಾ (ಪಶ್ಚಿಮಬಂಗಾಳ):ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಾತ್ಕಾಲಿಕವಾಗಿದ್ದು, ಅದು ಅಲ್ಪಾವಧಿಯಲ್ಲೇ ಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಭವಿಷ್ಯ ನುಡಿದರು.
ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಭಾನುವಾರ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋಮುವಾದಿ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರದಲ್ಲಿವೆ. ಅಧಿಕಾರದಲ್ಲಿ ಇರುವವರು, ದೇಶವನ್ನು ವಿಭಜಿಸುತ್ತಿದ್ದಾರೆ. ಒಡೆದು ಆಳುವ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಬಂಗಾಳದ ಜನರು ಒಗ್ಗಟ್ಟಿನಿಂದ ಹೋರಾಡಿ ಬಿಜೆಪಿಯನ್ನು ಸೋಲಿಸಿದ್ದಾರೆ. ಉತ್ತರ ಪ್ರದೇಶದಲ್ಲೂ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಿದೆ ಎಂದರು.
ಇದು ಅಲ್ಪಾಯುಷ್ಯ ಸರ್ಕಾರವಾಗಿದೆ. ಬಹುಬೇಗನೆ ಸರ್ಕಾರ ಪತನವಾಗಲಿದೆ. ದೇಶದ ಜನರು ಎಚ್ಚೆತ್ತುಕೊಂಡಾಗ, ವಿಭಜಕ ಮತ್ತು ಕೋಮುವಾದಿ ಶಕ್ತಿಗಳನ್ನು ಸೋಲಿಸಬಹುದು. ಬಿಜೆಪಿಗೆ ತಕ್ಕ ಉತ್ತರ ನೀಡಬಹುದು ಎಂದು ತೃಣಮೂಲ ರ್ಯಾಲಿಯಲ್ಲಿ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಬಿಜೆಪಿಯು ತನ್ನ ಇಚ್ಛೆಯಂತೆ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಚುನಾವಣಾ ಆಯೋಗವನ್ನೂ ದುರುಪಯೋಗ ಮಾಡಿಕೊಳ್ಳುತ್ತಿದೆ. ಇದು ಹೆಚ್ಚು ಕಾಲ ಮುಂದುವರಿಯುವುದಿಲ್ಲ. ಈ ಎಲ್ಲ ದುರಾಡಳಿತಕ್ಕೆ ಒಂದು ದಿನ ಅಂತ್ಯ ಇರಲಿದೆ ಎಂದು ಟೀಕಿಸಿದರು.