ಕರ್ನಾಟಕ

karnataka

ETV Bharat / bharat

ಆಹಾರ ​ಪೊಟ್ಟಣದ ಮೇಲೆ ಸಕ್ಕರೆ, ಉಪ್ಪಿನಂಶದ ಮಾಹಿತಿ ಮುದ್ರಣ ಕಡ್ಡಾಯ - Packaged Food Items - PACKAGED FOOD ITEMS

ಪ್ಯಾಕ್​ ಮಾಡಿದ ಆಹಾರದ ಪ್ಯಾಕೆಟ್​ಗಳ ಮೇಲೆ ಅದರಲ್ಲಿನ ಸಕ್ಕರೆ ಹಾಗೂ ಉಪ್ಪಿನ ಅಂಶಗಳ ಮಾಹಿತಿ ದಪ್ಪಕ್ಷರಗಳಲ್ಲಿ ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಎಫ್ಎಸ್ಎಸ್ಎಐ ಲೋಗೊ
ಎಫ್ಎಸ್ಎಸ್ಎಐ ಲೋಗೊ (IANS)

By ETV Bharat Karnataka Team

Published : Jul 7, 2024, 12:43 PM IST

ನವದೆಹಲಿ: ಆಹಾರ ಸುರಕ್ಷತೆಯ ವಿಷಯದಲ್ಲಿ ಐತಿಹಾಸಿಕ ಕ್ರಮ ಕೈಗೊಂಡಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್ಎಸ್ಎಸ್ಎಐ), ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಲ್ಲಿರುವ ಒಟ್ಟು ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪೌಷ್ಠಿಕಾಂಶದ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ಮತ್ತು ದೊಡ್ಡ ಗಾತ್ರದಲ್ಲಿ ಪ್ಯಾಕೆಟ್​ನ ಮೇಲೆ ಮುದ್ರಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ಎಫ್​​ಡಬ್ಲ್ಯೂ) ಶನಿವಾರ ತಿಳಿಸಿದೆ.

ಹೊಸ ನಿಯಮ: ಈ ಹೊಸ ನಿಯಮದಿಂದ ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳಲ್ಲಿನ ಒಟ್ಟು ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ಪ್ಯಾಕೆಟ್​ನ ಮೇಲೆ ದಪ್ಪ ಅಕ್ಷರಗಳಲ್ಲಿ ಮತ್ತು ತುಲನಾತ್ಮಕವಾಗಿ ದೊಡ್ಡ ಫಾಂಟ್ ಗಾತ್ರದಲ್ಲಿ ಮುದ್ರಿಸುವುದು ಕಡ್ಡಾಯ.

"ಶಿಫಾರಸು ಮಾಡಲಾದ ಆಹಾರ ಸೇವನೆಗೆ ಅನುಗುಣವಾಗಿ (ಆರ್​ಡಿಎ) ಪ್ರತಿ ಸರ್ವ್​​ನಲ್ಲಿ ಒಟ್ಟು ಸಕ್ಕರೆ, ಒಟ್ಟು ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂ ಅಂಶಗಳ ಶೇಕಡಾವಾರು ಪ್ರಮಾಣವನ್ನು ಪ್ಯಾಕೆಟ್​ನ ಮೇಲೆ ದಪ್ಪ ಅಕ್ಷರಗಳಲ್ಲಿ ಮುದ್ರಿಸಲಾಗುವುದು" ಎಂದು ಸಚಿವಾಲಯ ಹೇಳಿದೆ.

ಇದಕ್ಕಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಲೇಬಲಿಂಗ್ ಮತ್ತು ಪ್ರದರ್ಶನ) ನಿಯಮಗಳು, 2020 ಅನ್ನು ತಿದ್ದುಪಡಿ ಮಾಡುವ ನಿರ್ಧಾರವನ್ನು ಆಹಾರ ಪ್ರಾಧಿಕಾರದ 44ನೇ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ನಿಬಂಧನೆ 2 (v) ಮತ್ತು 5 (3) ಅನುಕ್ರಮವಾಗಿ ಆಹಾರ ಉತ್ಪನ್ನ ಲೇಬಲ್​ನಲ್ಲಿ ಆಹಾರದ ಪ್ರಮಾಣ ಮತ್ತು ಪೌಷ್ಠಿಕಾಂಶದ ಮಾಹಿತಿಯನ್ನು ನಮೂದಿಸುವ ಮಾನದಂಡಗಳನ್ನು ನಿರ್ದಿಷ್ಟಪಡಿಸುತ್ತದೆ.

ಉದ್ದೇಶವೇನು?: "ಹೊಸ ತಿದ್ದುಪಡಿಯು, ಗ್ರಾಹಕರು ತಾವು ಸೇವಿಸುವ ಆಹಾರದಲ್ಲಿನ ಪೌಷ್ಠಿಕಾಂಶದ ಮೌಲ್ಯವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಆರೋಗ್ಯಕರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಉದ್ದೇಶ ಹೊಂದಿದೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಪೌಷ್ಟಿಕಾಂಶ ತಜ್ಞರು ಹೇಳುವುದೇನು?: ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿರುವ ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳ ಹೆಚ್ಚಿನ ಸೇವನೆಯು ಸಾಂಕ್ರಾಮಿಕವಲ್ಲದ ರೋಗಗಳಿಗೆ (ಎನ್‌ಸಿಡಿ) ಕಾರಣವಾಗುತ್ತಿರುವುದರಿಂದ ಇಂಥ ಆಹಾರ ಪದಾರ್ಥಗಳ ಸೇವನೆಯನ್ನು ನಿಯಂತ್ರಿಸಬೇಕೆಂಬುದು ಪೌಷ್ಟಿಕಾಂಶ ತಜ್ಞರ ಅಭಿಪ್ರಾಯವಾಗಿದೆ. ಹೀಗಾಗಿ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸಲು ಹೊಸ ನಿಯಮ ಸಹಾಯಕವಾಗಲಿದೆ. ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲು ಎಫ್ಎಸ್ಎಸ್ಎಐ ಈ ತಿದ್ದುಪಡಿಯ ಕರಡು ಅಧಿಸೂಚನೆಯನ್ನು ಸಾರ್ವಜನಿಕ ವಲಯದಲ್ಲಿ ಹಂಚಿಕೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ಕಡಿಮೆ ಮಳೆ, ಅಧಿಕ ಇಂಗಾಲದಿಂದ ಭಾರತದ ಜೀವವೈವಿಧ್ಯ ತಾಣಗಳ ಮೇಲೆ ಪರಿಣಾಮ; ವರದಿ - Indias biodiversity hotspots

ABOUT THE AUTHOR

...view details