ಗುವಾಹಟಿ(ಅಸ್ಸಾಂ):ಜಗತ್ತಿನ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ನ ಭಾರತದ ಮುಖ್ಯಸ್ಥನನ್ನು ಅಸ್ಸಾಂ ವಿಶೇಷ ಕಾರ್ಯಪಡೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ ಆತನ ಇಬ್ಬರು ಸಹಚರರಲ್ಲಿ ಓರ್ವನ ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಇಬ್ಬರು ಉಗ್ರರನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಗೆ) ವಶಕ್ಕೆ ನೀಡಲಾಗಿದೆ.
ಹ್ಯಾರಿಸ್ ಅಲಿಯಾಸ್ ಹರೀಶ್, ಅನುರಾಗ್ ಅಲಿಯಾಸ್ ರೆಹಾನ್!: ಭಾರತದಲ್ಲಿ ಐಸಿಸ್ ಮುಖ್ಯಸ್ಥ ಎಂದು ಗುರುತಿಸಲಾದ ಉತ್ತರಾಖಂಡದ ಡೆಹ್ರಾಡೂನ್ ಮೂಲದ ಹ್ಯಾರಿಸ್ ಫಾರೂಕಿ ಅಲಿಯಾಸ್ ಹರೀಶ್ ಅಜ್ಮಲ್ ಫಾರೂಖಿ, ಈತನ ಸಹಚರ ಹರಿಯಾಣದ ಪಾಣಿಪತ್‌ನ ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಬಂಧಿತರು. ಇಬ್ಬರೂ ಬಾಂಗ್ಲಾದೇಶದಿಂದ ಅಸ್ಸಾಂ ಮೂಲಕ ಭಾರತಕ್ಕೆ ಬರುತ್ತಿದ್ದಾಗ ಎಸ್‌ಟಿಎಫ್ ಸೆರೆ ಹಿಡಿದಿದೆ.
ಬಾಂಗ್ಲಾದೇಶದಲ್ಲಿ ನೆಲೆ:ಬಾಂಗ್ಲಾದೇಶದಲ್ಲಿ ತಲೆಮರೆಸಿಕೊಂಡಿದ್ದ ಐಸಿಸ್ ಉಗ್ರರು ಭಾರತದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಧುಬ್ರಿ ಸೆಕ್ಟರ್‌ನಿಂದ ದೇಶಕ್ಕೆ ಬರುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಸಿಕ್ಕಿದೆ. ತಕ್ಷಣವೇ ಅಲರ್ಟ್ ಆದ ಅಸ್ಸಾಂನ ಎಸ್‌ಟಿಎಫ್ ನಿಖರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಶುರು ಮಾಡಿದೆ. ರಕ್ತಪಿಪಾಶುಗಳನ್ನು ಹಿಡಿಯಲು ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಕಾದು ಕುಳಿತಿದ್ದರು. ಬುಧವಾದ ಬೆಳಗಿನ ಜಾವ 4:15ರ ಸುಮಾರಿಗೆ ಉಗ್ರರು ಮಾಹಿತಿಯಂತೆ ಧುಬ್ರಿಯ ಧರ್ಮಶಾಲಾ ಪ್ರದೇಶದಲ್ಲಿ ಪತ್ತೆಯಾದಾಗ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.