ಹೈದರಾಬಾದ್:ಇಂದು ಅಂತಾರಾಷ್ಟ್ರೀಯ ನಿಶ್ಯಸ್ತ್ರೀಕರಣ ಮತ್ತು ಪ್ರಸರಣರಹಿತ ಜಾಗೃತಿ ದಿನ. ನಿಶ್ಯಸ್ತ್ರೀಕರಣವೆಂದರೆ, ಎಲ್ಲಾ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು (ಡಬ್ಲ್ಯೂಎಂಡಿ) ನಿರ್ಮೂಲನೆ ಮಾಡುವುದು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ವ್ಯಾಖ್ಯಾನಿಸಿದೆ. ಅಣ್ವಸ್ತ್ರ ಪ್ರಸರಣ ನಿಷೇಧ ಎಂದರೆ ಪರಮಾಣು ಅಥವಾ ರಾಸಾಯನಿಕ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಪ್ರಸರಣೆಯನ್ನು ಯುದ್ಧದಾಹಿ ರಾಷ್ಟ್ರಗಳ ಕೈಗೆ ಸಿಗದಂತೆ ಮಾಡುವುದಾಗಿದೆ.
ದಿನದ ಇತಿಹಾಸ: ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಜನರಲ್ಲಿ ನಿಶ್ಯಸ್ತ್ರೀಕರಣದ ಬಗ್ಗೆ ಜಾಗೃತಿ ಮತ್ತು ತಿಳಿವಳಿಕೆ ಮೂಡಿಸಲು ವಿಶ್ವಸಂಸ್ಥೆ ಮೊದಲ ನಿಶ್ಯಸ್ತ್ರೀಕರಣ ಮತ್ತು ಪ್ರಸರಣರಹಿತ ಜಾಗೃತಿಯನ್ನು ಮಾರ್ಚ್ 5, 2023ರಂದು ಆಚರಿಸಿತು. ಡಿಸೆಂಬರ್ 7, 2022ರಂದು ಯುಎನ್‌ಜಿಎ ಈ ಕುರಿತ ನಿರ್ಣಯ ಅಂಗೀಕರಿಸಿತು. ಈ ಮೂಲಕ ಪ್ರತೀ ವರ್ಷ ಮಾರ್ಚ್ 5 ಅನ್ನು 'ನಿಶ್ಯಸ್ತ್ರೀಕರಣ ಮತ್ತು ಪ್ರಸರಣರಹಿತ ಅಂತಾರಾಷ್ಟ್ರೀಯ ದಿನ' ಎಂದು ಘೋಷಿಸಿತು.
ಗುರಿಗಳೇನು?:
- ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಅಪಾಯಗಳು ಮತ್ತು ನಿಶ್ಯಸ್ತ್ರೀಕರಣ ಮತ್ತು ಪ್ರಸರಣ ರಹಿತತೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು.
- ನಿಶ್ಯಸ್ತ್ರೀಕರಣ ಮತ್ತು ಪ್ರಸರಣರಹಿತ ವಿಷಯಗಳ ಬಗ್ಗೆ ಶಿಕ್ಷಣವನ್ನು ಉತ್ತೇಜಿಸುವುದು.
- ಶಸ್ತ್ರಾಸ್ತ್ರಗಳ ಬೆದರಿಕೆಯನ್ನು ಕಡಿಮೆ ಮಾಡಲು ಮತ್ತು ಶಾಂತಿ, ಭದ್ರತೆಯನ್ನು ಉತ್ತೇಜಿಸುವ ಕ್ರಮವನ್ನು ಪ್ರೋತ್ಸಾಹಿಸುವುದು.
21ನೇ ಶತಮಾನದಲ್ಲಿ ನಿಶ್ಯಸ್ತ್ರೀಕರಣದ ಅಗತ್ಯ:ನಿಶ್ಯಸ್ತ್ರೀಕರಣವು ಸಶಸ್ತ್ರ ಸಂಘರ್ಷಗಳನ್ನು ತಡೆಗಟ್ಟಲು ಮತ್ತು ಅವುಗಳ ಪರಿಣಾಮಗಳನ್ನು ತಗ್ಗಿಸಲು ಸಹಾಯ ಮಾಡುವ ಸಾಧನ. ಶೀತಲ ಸಮರದ ಉದ್ವಿಗ್ನತೆಗಳು ಹಿಂತಿರುಗಿವೆ. ಜಗತ್ತು ಹೆಚ್ಚು ಸಂಕೀರ್ಣ ಮತ್ತು ಅಪಾಯಕಾರಿ ವಾತಾವರಣದ ಎದುರಿಸುತ್ತಿದೆ. ಆಧುನಿಕ ಶಸ್ತ್ರಾಸ್ತ್ರಗಳ ಬಳಕೆಯಿಂದಾಗಿ ಸಶಸ್ತ್ರ ಸಂಘರ್ಷಗಳು ನಾಗರಿಕರಿಗೆ ಮಾರಕವಾಗಿವೆ. ಇದನ್ನು ಸಿರಿಯಾ, ಯೆಮೆನ್, ಇರಾಕ್, ಅಫ್ಘಾನಿಸ್ತಾನ ಮತ್ತು ಪ್ಯಾಲೆಸ್ಟೈನ್‌ನಲ್ಲಿನ ಅಂತರ್ಯುದ್ಧಗಳು, ಭಯೋತ್ಪಾದಕರ ಮೂಲಕ ಕಾಣಬಹುದು.