ಕರ್ನಾಟಕ

karnataka

ETV Bharat / bharat

ರಣಭಯಂಕರ ಬಿಸಿಗಾಳಿ ಅಬ್ಬರ​: ಬಿಹಾರದಲ್ಲಿ 3 ದಿನಗಳಲ್ಲಿ 80 ಜನರು ಬಲಿ - Heatwave in Bihar

ಬಿಸಿಗಾಳಿಯ ಹೊಡೆತಕ್ಕೆ ಬಿಹಾರದಲ್ಲಿ ಮೂರು ದಿನಗಳಲ್ಲಿ 80 ಜನ ಬಲಿಯಾಗಿದ್ದಾರೆ.

ಬಿಸಿಗಾಳಿಗೆ ಬಿಹಾರದಲ್ಲಿ 80 ಜನ ಬಲಿಯಾಗಿದ್ದಾರೆ
ಬಿಸಿಗಾಳಿಗೆ ಬಿಹಾರದಲ್ಲಿ 80 ಜನ ಬಲಿಯಾಗಿದ್ದಾರೆ (IANS image)

By ETV Bharat Karnataka Team

Published : May 31, 2024, 6:29 PM IST

ಪಾಟ್ನಾ: ಬಿಹಾರದಲ್ಲಿ ಬಿಸಿಗಾಳಿಯ ಅಲೆ ತೀವ್ರವಾಗಿದ್ದು, ಕಳೆದ ಮೂರು ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 80 ಕ್ಕೂ ಹೆಚ್ಚು ಜನ ಬಿಸಿಲಿನ ತಾಪದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಮೃತರ ಮರಣೋತ್ತರ ವರದಿಗಳು ಇನ್ನೂ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಔರಂಗಾಬಾದ್​ನಲ್ಲಿ ಗರಿಷ್ಠ ತಾಪಮಾನವಿದ್ದು, ಇಲ್ಲಿ 19 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರ ಔರಂಗಾಬಾದ್​ನ ಗರಿಷ್ಠ ತಾಪಮಾನ 48.2 ಡಿಗ್ರಿ ಸೆಲ್ಸಿಯಸ್​ಗೆ ತಲುಪಿದೆ. ಅಲ್ಲದೇ ಔರಂಗಾಬಾದ್​ನಲ್ಲಿ ಶಾಖದ ಹೊಡೆತದಿಂದಾಗಿ ಸುಮಾರು 200 ಜನ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಗೆ ದಾಖಲಾದ ಸುಮಾರು 200 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಸದರ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಅಭಿಷೇಕ್ ಕುಮಾರ್ ತಿಳಿಸಿದ್ದಾರೆ.

ಬಿಹಾರದ ಹಲವಾರು ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ ಬಿಸಿಲಿನ ತಾಪದಿಂದ ಬಳಲಿದ 300 ಕ್ಕೂ ಹೆಚ್ಚು ಜನ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಸಿಲಿನ ಹೊಡೆತದಿಂದ ಪಾರಾಗಲು ಜನರು ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಅರ್ವಾಲ್, ಬಕ್ಸಾರ್, ರೋಹ್ಟಾಸ್ ಮತ್ತು ಬೇಗುಸರಾಯ್ ಜಿಲ್ಲೆಗಳಲ್ಲಿ ಬಿಸಿಗಾಳಿಯಿಂದಾಗಿ ಎಂಟು ಜನ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಟ್ನಾ-ಗಯಾ ರೈಲ್ವೆ ವಿಭಾಗದ ನಾದೌಲ್ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಶಾಖದ ಹೊಡೆತದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಮೃತ ದೇಹಗಳನ್ನು ಇನ್ನೂ ಗುರುತಿಸಲಾಗಿಲ್ಲ.

ಪಾಟ್ನಾದ ಪಿಎಂಸಿಎಚ್​ನಲ್ಲಿ ಸೆಕ್ಟರ್ ಅಧಿಕಾರಿಯೊಬ್ಬರು ಚಿಕಿತ್ಸೆಯ ಸಮಯದಲ್ಲಿ ನಿಧನರಾಗಿದ್ದಾರೆ. ಮೃತ ಅಧಿಕಾರಿಯನ್ನು ದುಖರನ್ ಪ್ರಸಾದ್ ಎಂದು ಗುರುತಿಸಲಾಗಿದ್ದು, ಇವರು ಪಾಟ್ನಾದ ಹೊರವಲಯದ ಗ್ರಾಮ ಧನರುವಾದ ಕೃಷಿ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದರು. ಧನರುವಾದಲ್ಲಿ ಮೂರ್ಛೆ ಹೋದ ಅವರನ್ನು ಶುಕ್ರವಾರ ಪಿಎಂಸಿಎಚ್​ಗೆ ದಾಖಲಿಸಲಾಗಿತ್ತು.

ಭೋಜಪುರ ಜಿಲ್ಲೆಯ ಅರ್ರಾ ನಗರದಲ್ಲಿ ಬಿಸಿಗಾಳಿಯಿಂದಾಗಿ ಐದು ಮತಗಟ್ಟೆ ಸಿಬ್ಬಂದಿ ಸೇರಿದಂತೆ ಒಂಬತ್ತು ಜನ ಸಾವನ್ನಪ್ಪಿದ್ದಾರೆ. ಇದಲ್ಲದೇ, ಬಿಸಿಗಾಳಿ ಸಿಪಿಐ - ಎಂಎಲ್​ನ ರಾಜ್ಯ ಸಮಿತಿ ಸದಸ್ಯರೊಬ್ಬರ ಜೀವವನ್ನೂ ಬಲಿ ಪಡೆದಿದೆ. ರೋಹ್ಟಾಸ್​ನಲ್ಲಿ ಬಿಸಿಗಾಳಿಯಿಂದಾಗಿ ಎಂಟು ಜನ ಸಾವನ್ನಪ್ಪಿದ್ದಾರೆ. ಜೆಹಾನಾಬಾದ್ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಸೈನಿಕ ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. ಕೈಮೂರ್ ಜಿಲ್ಲೆಯಲ್ಲಿ ಶಿಕ್ಷಕಿ ಸೇರಿದಂತೆ ಆರು ಜನರು ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಶಾಖದ ಅಲೆಗೆ ಉತ್ತರ ಭಾರತ ತತ್ತರ; 48 ಗಂಟೆಗಳಲ್ಲಿ 47 ಸಾವು - Heatwave

ABOUT THE AUTHOR

...view details