ಬಜೆಟ್ ಮಂಡನೆ ಬಂತೆಂದರೆ ಈ ಬಾರಿ ಯಾವ ಹೊಸ ಯೋಜನೆಗೆ ಎಷ್ಟು ಅನುದಾನ ಬರಲಿದೆ ಎಂಬ ನಿರೀಕ್ಷೆಯಲ್ಲಿ ದೇಶದ ಜನರಿರುತ್ತಾರೆ. ಆದರೆ ಹೆಚ್ಚಿನವರು ಮಾತ್ರ ವಿತ್ತ ಸಚಿವೆ ಯಾವ ಸೀರೆ ಉಟ್ಟು ಬರುತ್ತಾರೆ ಎಂಬ ಕುತೂಹಲದಲ್ಲಿ ಇದ್ದಿದ್ದಂತೂ ನಿಜ. ಹೌದು, ಹೆಸರಿನಂತೆ ನಿರ್ಮಲ ನಗೆ ಬೀರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಹಲವಾರು ಅಭಿಮಾನಿಗಳಿದ್ದಾರೆ. ಯಾವ ಸೆಲೆಬ್ರೆಟಿಗೂ ಕಮ್ಮಿ ಇಲ್ಲದಂತೆ ಇವರ ಔಟ್ಫಿಟ್ನ್ನು ಪಾಲೋ ಮಾಡುವ ಮಹಿಳೆಯರಿದ್ದಾರೆ. ಹಣಕಾಸು ಸಚಿವೆಯಾದಾಗಿನಿಂದ ನಿರ್ಮಲಾ ಸೀತಾರಾಮನ್ ಇಲ್ಲಿವರೆಗೆ ಒಟ್ಟು 6 ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಬರೆದಿದ್ದಾರೆ.
ಹೆಚ್ಚಾಗಿ ನೇಯ್ದ ಸೀರೆಗಳತ್ತ ಒಲವು ತೋರುವ ಇವರು ಈ ಬಾರಿ ರಾಮ - ನೀಲಿ ಮತ್ತು ಕ್ರೀಂ ಬಣ್ಣದ ಕಾಂಬೀನೇಷನ್ನಲ್ಲಿ ಕಸೂತಿ ಟಸ್ಸಾರ್ ರೇಷ್ಮೆ ಸೀರೆಯನ್ನು ಧರಿಸಿ ನೂತನ ಸಂಸತ್ಗೆ ಕೆಂಪು ಬಣ್ಣದ ಪೌಚ್ ಹೊಂದಿದ ಟಾಬ್ ಹಿಡಿದು ಬಜೆಟ್ ಮಂಡಿಸಲು ಆಗಮಿಸುವ ಮೂಲಕ ಗುರುವಾರ ಎಲ್ಲರ ಗಮನ ಸೆಳೆದಿದ್ದಾರೆ.
ಈ ಬಾರಿ ಬೆಂಗಾಲಿ ಮಹಿಳೆಯರು ಉಡುವ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟು ಬಂದಿದ್ದು ವಿಶೇಷವಾಗಿತ್ತು. ಕಾಂತ ಕಸೂತಿ, ಪೂರ್ವ ಭಾರತದ ಕೈ ಹೊಲಿಗೆಗಳಲ್ಲಿ ಒಂದಾಗಿದೆ. ಈ ಸೀರೆ ಶತಮಾನಗಳ ಇತಿಹಾಸವನ್ನು ಹೊಂದಿದೆ. ಇದನ್ನೂ ಟಸ್ಸಾರ್ ರೇಷ್ಮೆಯ ಮೂಲಕ ತಯಾರಿಸಲಾಗುತ್ತದೆ. ಬಂಗಾಳ ಹಾಗೂ ಒಡಿಶಾ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಈ ಸೀರೆ ಜನಪ್ರಿಯವಾಗಿದೆ. ಈ ಬಾರಿ ನಿರ್ಮಲಾ ಸೀತಾರಾಮನ್ ಧರಿಸಿರುವ ಸೀರೆಯ ಬಣ್ಣ, ಶಕ್ತಿ, ನಂಬಿಕೆ, ಸ್ಥಿರತೆ ಮತ್ತು ಏಕತೆಯ ಸೂಚಕವಾಗಿದೆ. ಅಲ್ಲದೇ ಅಯೋಧ್ಯೆಯು ರಾಮನ ಜೀವನದ ಪ್ರತಿಷ್ಠೆಯ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.