ಕರ್ನಾಟಕ

karnataka

ETV Bharat / bharat

ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿದ್ದ ರತನ್ ಟಾಟಾ; ಕೊಡುಗೈ ದಾನಿಯ ಕೊಡುಗೆ ಬಗ್ಗೆ ನಿಮಗೆಷ್ಟು ಗೊತ್ತು? - MEMORIES WITH RATAN TATA

ತಿರುಮಲ ಮತ್ತು ತಿರುಪತಿಯೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದ ರತನ್​ ಟಾಟಾ ಅವರು ತಿಮ್ಮಪ್ಪನ ಪರಮ ಭಕ್ತರು ಕೂಡ ಆಗಿದ್ದರು. ಆ ಬಗ್ಗೆ ಇಲ್ಲಿದೆ ಕೆಲ ಇಂಟ್ರೆಸ್ಟಿಂಗ್​ ಮಾಹಿತಿ.

MEMORIES WITH RATAN TATA
ತಿಮ್ಮಪ್ಪನ ಸನ್ನಿಧಾನದಲ್ಲಿ ರತನ್ ಟಾಟಾ (ETV Bharat)

By ETV Bharat Karnataka Team

Published : Oct 11, 2024, 2:22 PM IST

ಹೈದರಾಬಾದ್: ಕೋಟ್ಯಂತರ ಜನರನ್ನು ಅಗಲಿದ ಟಾಟಾ ಸಮೂಹ ಸಾಮ್ರಾಜ್ಯದ ವಿಶ್ರಾಂತ ಮುಖ್ಯಸ್ಥ ಹಾಗೂ ಶ್ರೇಷ್ಠ ಸಮಾಜ ಸೇವಕ ರತನ್​ ಟಾಟಾ ಅವರು ತಿರುಪತಿ ತಿಮ್ಮಪ್ಪನ ಭಕ್ತರೂ ಆಗಿದ್ದರು. ಕೊಡುಗೈ ದಾನಿಯಾಗಿದ್ದ ಅವರು ತಿರುಮಲ ಮತ್ತು ತಿರುಪತಿಯೊಂದಿಗೆ ವಿಶೇಷ ಹಾಗೂ ಅವಿನಾಭಾವ ಸಂಬಂಧ ಹೊಂದಿದ್ದರು. ಶ್ರೀಸಾಮಾನ್ಯರಂತೆ ಇಲ್ಲಿಗೆ ಬಂದು ಹೋಗುತ್ತಿದ್ದ ಅವರು, ಈ ನೆಲಕ್ಕೆ ತಮ್ಮದೇ ಆದ ಸಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಅನ್ನೋದಕ್ಕೆ ಅನೇಕ ಸಾಕ್ಷಿಗಳಿವೆ.

ಪ್ರತಿನಿತ್ಯ ಕೋಟ್ಯಂತರ ಭಕ್ತರು ಆಗಮಿಸಿ ಯಾವುದೇ ಅಡೆತಡೆಯಿಲ್ಲದೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಹೋಗುತ್ತಿರುವುದಕ್ಕೆ ಹಾಗೂ ಭಕ್ತರ ಆರೋಗ್ಯದ ದೃಷ್ಟಿಯಿಂದ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಅದರಲ್ಲಿ ಸಮಾಜ ಸೇವಕ ರತನ್​ ಟಾಟಾ ಅವರ ಕೊಡುಗೆ ಕೂಡ ಸೇರಿವೆ.

ಭೂಮಿಪೂಜೆ ಮಾಡಿದ ಕ್ಷಣ (ETV Bharat)

ಆನ್‌ಲೈನ್ ಸೇವೆ: ತಿಮ್ಮಪ್ಪನ ದರ್ಶನಕ್ಕಾಗಿ ಬರುವ ಭಕ್ತರಿಗೆ ಅನುಕೂಲವಾಗಲೆಂದು, ಜೊತೆಗೆ ಪಾರದರ್ಶಕತೆಯಿಂದ ಇರಲಿ ಎಂಬ ಸದುದ್ದೇಶದಿಂದ ಆನ್‌ಲೈನ್ ಸೇವೆಗಳನ್ನು ಒದಗಿಸುವಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS-ಟಿಸಿಎಸ್) ಪ್ರಮುಖ ಪಾತ್ರ ವಹಿಸಿದೆ. ಟಿಟಿಡಿಗೆ ಉಚಿತ ಸಾಫ್ಟ್​ವೇರ್ ಸೇವೆ ಒದಗಿಸುವ ಒಪ್ಪಂದ ಒಂದು ಮೈಲಿಗಲ್ಲು ಎಂದೇ ಹೇಳಬಹುದು. ಈ ಹಿಂದೆಯೂ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರ ಮನವಿ ಮೇರೆಗೆ ಈ ಹಿಂದಿನ ಇಒ ಸಾಂಬಶಿವ ರಾವ್ ಅವರ ಅವಧಿಯಲ್ಲಿ ಟಿಸಿಎಸ್ ಅಗತ್ಯ ಸಾಫ್ಟ್‌ವೇರ್ ಸೇವೆಗಳು ಒದಗಿಸಿದ್ದು, ಅದು ಈಗಲೂ ಚಾಲ್ತಿಯಲ್ಲಿದೆ. ಟಿಸಿಎಸ್ ಕಳೆದ ಎಂಟು ವರ್ಷಗಳಿಂದ ಆನ್‌ಲೈನ್ ಮತ್ತು ಕರೆಂಟ್ ಬುಕಿಂಗ್‌ನಲ್ಲಿ ಟಿಕೆಟ್ ವಿತರಣೆ, ಕೊಠಡಿ ಹಂಚಿಕೆ, ನಗದು ಪಾವತಿ ಸೇರಿದಂತೆ ಹತ್ತು ಹಲವು ಸೇವೆಗಳನ್ನು ಒದಗಿಸುತ್ತಿದೆ. ವರ್ಷಕ್ಕೆ ಸುಮಾರು 12 ಕೋಟಿ ರೂ. ಮೌಲ್ಯದ ಸೇವೆಗಳನ್ನು ಒದಗಿಸುತ್ತಿರುವುದು ಟಾಟಾ ಅವರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಕೊನೆಯದಾಗಿ 2018 ರಲ್ಲಿ, ರತನ್ ಟಾಟಾ ಅವರು ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ್ದನ್ನು ಸ್ಮರಿಸಿಕೊಳ್ಳಬಹುದು.

ಟಾಟಾ ಟ್ರಸ್ಟ್‌ನಿಂದ ವೈದ್ಯಕೀಯ ಸೇವೆ: ಸಾಫ್ಟ್​ವೇರ್​, ತಾಂತ್ರಿಕ ಸೇವೆ ಅಲ್ಲದೇ ಬಡವರನ್ನು ಕ್ಯಾನ್ಸರ್‌ನಿಂದ ರಕ್ಷಿಸಲು ಟಾಟಾ ಟ್ರಸ್ಟ್ ತಿರುಪತಿಯಲ್ಲಿ ಸುಧಾರಿತ ವೈದ್ಯಕೀಯ ಸೇವೆಗಳನ್ನು ಸಲ್ಲಿಸುತ್ತಾ ಬಂದಿರುವುದು ಮತ್ತೊಂದು ನಿಸ್ವಾರ್ಥತೆಗೆ ಸಾಕ್ಷಿ. 25 ಎಕರೆ ಜಾಗದಲ್ಲಿ ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ಶ್ರೀ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಕೇರ್ ಅಂಡ್ ಅಡ್ವಾನ್ಸ್‌ಡ್ ರಿಸರ್ಚ್ ಸೆಂಟರ್ (SWICAR) ಅನ್ನು ಸ್ಥಾಪಿಸುವ ಮೂಲಕ ಕೋಟ್ಯಂತರ ಭಕ್ತರ ಪಾಲಿನ ಸಂಜೀವಿನಿಯಾಗಿದ್ದಾರೆ.

ಅಷ್ಟೇ ಅಲ್ಲದೇ, ಟಾಟಾ ಟ್ರಸ್ಟ್ ದೇಶದ ಐದು ಸ್ಥಳಗಳಲ್ಲಿ 1,800 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆಗಳನ್ನು ಆರಂಭಿಸಿದ್ದು ಕೊಡುಗೈ ದಾನಿಯ ಮತ್ತೊಂದು ಸರಳತೆಗೆ ಸಾಕ್ಷಿ ಎಂದೇ ಹೇಳಬಹುದು. ವೈದ್ಯಕೀಯ ಸೇವೆಗಾಗಿ ಆಗಸ್ಟ್ 31, 2018 ರಂದು, ರತನ್ ಟಾಟಾ ಅವರು ಚಂದ್ರಬಾಬು ನಾಯ್ಡು ಅವರೊಂದಿಗೆ ಭೂಮಿಪೂಜೆ ಮಾಡಿದ್ದರು. ಅವರ ಕೋರಿಕೆಯ ಮೇರೆಗೆ ಟಿಟಿಡಿಯು ಬೆಲೆಬಾಳುವ ಭೂಮಿಯನ್ನು ಟಾಟಾ ಟ್ರಸ್ಟ್‌ಗೆ ನಾಮಮಾತ್ರ ಗುತ್ತಿಗೆಗೆ ಮಂಜೂರು ಸಹ ಮಾಡಲಾಗಿತ್ತು. ಆರಂಭದಲ್ಲಿ, ಕೇವಲ ಹತ್ತು ಹಾಸಿಗೆಗಳೊಂದಿಗೆ ವೈದ್ಯಕೀಯ ಸೇವೆಯನ್ನು ನೀಡಲಾಯಿತು. ಸದ್ಯ ಅದು ನೂರು ಹಾಸಿಗೆ ಆಸ್ಪತ್ರೆಯಾಗಿ ಸೇವೆ ಸಲ್ಲಿಸುತ್ತಿದೆ.

ಪ್ರತಿ ದಿನ 300 ಹೊರರೋಗಿಗಳು ವೈದ್ಯಕೀಯ ಸೇವೆಗೆಗಾಗಿ ಆಗಮಿಸುತ್ತಿದ್ದರೆ, ತಿಂಗಳಿಗೆ 1,100 ಕೀಮೋಗಳು ಮತ್ತು 85 ಜನರು ಪ್ರತಿದಿನ ರೇಡಿಯೊಥೆರಪಿಗೆ ಒಳಗಾಗುತ್ತಿದ್ದಾರೆ. ಟಾಟಾ ಕ್ಯಾನ್ಸರ್ ಆಸ್ಪತ್ರೆ ಪ್ರತಿ ತಿಂಗಳು ಸರಾಸರಿ 130 ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮೂಲಕ ರಾಯಲಸೀಮಾ ಮತ್ತು ನೆಲ್ಲೂರು ಜಿಲ್ಲೆಗಳ ಜನರ ಸಂಜೀವಿನಿಯಾಗಿದೆ. ಕ್ಯಾನ್ಸರ್ ಜಾಗೃತಿಗಾಗಿ ಗುಲಾಬಿ ಬಸ್ ಸೇವೆಯನ್ನು ಸಹ ಒದಗಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಆಂಧ್ರ ಪ್ರದೇಶದ ಎಲ್ಲಾ ಪ್ರದೇಶಗಳಲ್ಲಿ ಕ್ಯಾನ್ಸರ್ ತಪಾಸಣೆ ನಡೆಸಲಾಗುತ್ತಿದ್ದು, ಹಂತ 1, 2 ಮತ್ತು 3 ಹಂತದ ಕ್ಯಾನ್ಸರ್ ಕೇಂದ್ರಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರೀಸಿಟಿಯೊಂದಿಗೆ ಟಾಟಾ ಒಪ್ಪಂದ: ಟಾಟಾ ಸ್ಮಾರ್ಟ್ ಫುಡ್ ಲಿಮಿಟೆಡ್ (TSFL), ದೇಶದ ರೆಡಿ-ಟು-ಈಟ್ (RTE) ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ಕಂಪನಿ ಎಂಬ ಖ್ಯಾತಿ ಪಡೆದಿದ್ದು, ಈ ಉದ್ಯಮವನ್ನು ಸ್ಥಾಪಿಸಲು ರತನ್ ಟಾಟಾ ಶ್ರೀಸಿಟಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ಅವರ ಸರಳತೆಗೆ ಮತ್ತೊಂದು ಗರಿ.

ಶ್ರೀಸಿಟಿಯ ಕ್ರಿಯಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸಲಹೆಗಾರರೂ ಆಗಿರುವ ರತನ್ ಟಾಟಾ ಅವರು 16ನೇ ಏಪ್ರಿಲ್ 2019 ರಂದು ಶ್ರೀಸಿಟಿಗೆ ಭೇಟಿ ನೀಡಿದರು. ಅವರೊಂದಿಗಿನ ಒಡನಾಟನವನ್ನು ಸ್ಮರಿಸಿದ ಡಾ.ರವೀಂದ್ರಸನ್ನ ರೆಡ್ಡಿ ಅವರು, ರತನ್ ಟಾಟಾ ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ಶ್ಲಾಘಿಸಿದರು.

ಇದನ್ನೂ ಓದಿ:ಭಾರತದ ಆತ್ಮೀಯ ಸ್ನೇಹಿತನನ್ನು ಫ್ರಾನ್ಸ್​ ಕಳೆದುಕೊಂಡಿದೆ: ರತನ್​ ಟಾಟಾ ಸಾವಿಗೆ ಮ್ಯಾಕ್ರನ್ ಕಂಬನಿ​ ​

ABOUT THE AUTHOR

...view details