ನವದೆಹಲಿ: ಏಡೆನ್ ಕೊಲ್ಲಿಯಲ್ಲಿ ಇರಾನ್ ಬೆಂಬಲಿತ ಹೌತಿ ಉಗ್ರರು ಮತ್ತೆ ವಾಣಿಜ್ಯ ಸರಕು ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ದಾಳಿಯ ನಂತರ ಹಡಗಿನಿಂದ ಬಂದ ತುರ್ತು ಕರೆಗೆ ತ್ವರಿತವಾಗಿ ಸ್ಪಂದಿಸಿದ ಭಾರತೀಯ ನೌಕಾಪಡೆಯು, ಹಡಗಿನಲ್ಲಿದ್ದ 22 ಭಾರತೀಯ ಸಿಬ್ಬಂದಿಯನ್ನು ರಕ್ಷಿಸಿದೆ. ಜೊತೆಗೆ ತಗುಲಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಈ ಹಡಗು ಮಾರ್ಗದಲ್ಲಿ ಕಳೆದ ಕೆಲವು ವಾರಗಳಿಂದಲೂ ಇದೇ ರೀತಿಯ ದಾಳಿಗಳು ನಡೆಯುತ್ತಿವೆ.
ಸ್ಥಳಕ್ಕೆ ಧಾವಿಸಿದ INS ವಿಶಾಖಪಟ್ಟಣಂ:ಶುಕ್ರವಾರ ರಾತ್ರಿ ಮಾರ್ಷಲ್ ಐಲ್ಯಾಂಡ್ಸ್ ಧ್ವಜದ ನೌಕೆ MV ಮಾರ್ಲಿನ್ ಲುವಾಂಡಾ ಹಡಗಿನಿಂದ ಕರೆ ಬಂದ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ತನ್ನ ಕ್ಷಿಪಣಿ ವಿಧ್ವಂಸಕ INS ವಿಶಾಖಪಟ್ಟಣಂ ಅನ್ನು ದಾಳಿಗೊಳಗಾದ ನೌಕೆಗೆ ಸಹಾಯ ಮಾಡಲು ನಿಯೋಜಿಸಿತು. ಎಂವಿ ಮಾರ್ಲಿನ್ ಲುವಾಂಡಾ ಅವರ ಸಿಬ್ಬಂದಿಯೊಂದಿಗೆ ಆರು ಗಂಟೆಗಳ ಕಾಲ ಬೆಂಕಿ ನಂದಿಸುವ ಮೂಲಕ ನೌಕಾಪಡೆಯ ಅಗ್ನಿಶಾಮಕ ತಂಡವು ಯಶಸ್ವಿಯಾಗಿ ಬೆಂಕಿಯನ್ನು ಹತೋಟಿಗೆ ತಂದಿತು ಎಂದು ನೌಕಾಪಡೆ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ನವದೆಹಲಿಯಲ್ಲಿ ಮಾಹಿತಿ ನೀಡಿದರು.
ಹೌತಿ ಉಗ್ರರ ಉಟ್ಟಹಾಸ: ಹೌತಿ ಉಗ್ರರು ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಭದ್ರತಾ ಪರಿಸ್ಥಿತಿಯ ಬಗ್ಗೆ ಜಾಗತಿಕವಾಗಿ ಆತಂಕ ಹೆಚ್ಚುತ್ತಿದೆ. ಈ ನಡುವೆಯೇ ಘಟನೆ ಮರುಕಳಿಸಿದೆ. ಯುಕೆ ಮೂಲದ ಓಸಿಯೊನಿಕ್ಸ್ ಸರ್ವಿಸಸ್ ಈ ಹಡಗನ್ನು ನಿರ್ವಹಿಸುತ್ತಿದೆ.
''ಹೌತಿಗಳು ನವೆಂಬರ್‌ನಿಂದ ಕೆಂಪು ಸಮುದ್ರ ಮತ್ತು ಪಕ್ಕದ ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಎಂವಿ ಮಾರ್ಲಿನ್ ಲುವಾಂಡಾದ ಸಂಕಷ್ಟದ ಕರೆಗೆ ಪ್ರತಿಕ್ರಿಯಿಸಿದ ಐಎನ್‌ಎಸ್ ವಿಶಾಖಪಟ್ಟಣಂ ನೆರವು ನೀಡಲು ಮುಂದಾಯಿತು. ಯುಎಸ್ ಮತ್ತು ಫ್ರೆಂಚ್ ಯುದ್ಧನೌಕೆ ಕೂಡ ಸಂಕಷ್ಟದ ಕರೆಗೆ ಸ್ಪಂದಿಸಿವೆ'' ಎಂದು ಮಧ್ವಲ್ ತಿಳಿಸಿದರು.