ನವದೆಹಲಿ:ಅರಬ್ಬಿ ಸಮುದ್ರದಲ್ಲಿ ನಡೆದ 12 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯು 23 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ ಮಾಡಿದೆ. ಮಾರ್ಚ್ 29ರಂದು ಬೆಳಿಗ್ಗೆ ಐಎನ್‌ಎಸ್ ಸುಮೇಧಾ ನೌಕೆಯು ಅಪಹರಣಕ್ಕೊಳಗಾದ ಎಫ್‌ವಿ ಅಲ್-ಕಂಬಾರ್ ಹಡಗಿನ ರಕ್ಷಣೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಿತ್ತು. ಈ ಕಾರ್ಯಾಚರಣೆಯ ವೇಗ ಹಚ್ಚಿಸಲು ಐಎನ್‌ಎಸ್ ಸುಮೇಧಾ ಜತೆಗೆ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆ INS ತ್ರಿಶೂಲ್ ಕೂಡಾ ಸೇರಿಕೊಂಡಿತ್ತು.
ಇರಾನ್ ಮೂಲದ ಎಫ್‌ವಿ ಅಲ್-ಕಂಬಾರ್ ಹಡಗು ಸೊಕೊಟ್ರಾ ಎಂಬ ಪ್ರದೇಶದಿಂದ ಸುಮಾರು 90 ನಾಟಿಕಲ್ ಮೈಲು ನೈಋತ್ಯದಲ್ಲಿತ್ತು. ಈ ಹಡಗಿಗೆ ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರು ಹತ್ತಿದ್ದಾರೆ. ಸುದ್ದಿ ತಿಳಿದು ಭಾರತೀಯ ನೌಕಾ ಪಡೆಯು ಕಡಲ್ಗಳ್ಳರೊಂದಿಗೆ ಮಾತುಕತೆ ಆರಂಭಿಸಿತ್ತು. ರಕ್ತಪಾತವಿಲ್ಲದೆ ಶರಣಾಗುವಂತೆ ಮನವಿ ಮಾಡಿದೆ. ಬಳಿಕ ನೌಕಪಡೆಯು ಕಡಲ್ಗಳ್ಳರನ್ನು ತಮ್ಮ ವಶಕ್ಕೆ ಪಡೆದುಕೊಂಡಿತು.