ಜೈಸಲ್ಮೇರ್ (ರಾಜಸ್ಥಾನ):ಶತ್ರು ಪಡೆಯ ವಿಮಾನಗಳು, ಡ್ರೋನ್‌ಗಳು ಮತ್ತು ಇತರ ವೈಮಾನಿಕ ಸಾಧನಗಳನ್ನು ಕಡಿಮೆ ವ್ಯಾಪ್ತಿಯಲ್ಲಿ ಹೊಡೆದುರುಳಿಸುವ ಸಾಮರ್ಥ್ಯದ ಸ್ವದೇಶಿ ನಿರ್ಮಿತ VSHORADS ಕ್ಷಿಪಣಿಯ ಪ್ರಯೋಗವನ್ನು ಶನಿವಾರ ಯಶಸ್ವಿಯಾಗಿ ನಡೆಸಲಾಯಿತು.
ರಾಜಸ್ಥಾನದ ಜೈಸಲ್ಮೇರ್‌ನ ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆಯ ಮೂರು ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಪ್ರಾಯೋಗಿಕ ಪರೀಕ್ಷೆ ನಡೆಸಿ ಯಶಸ್ವಿಯಾಯಿತು. ನಿಗದಿತ ಗುರಿ ಸಾಧನೆ ಮಾಡಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ಡಿಒ, ಭಾರತೀಯ ಸೇನೆಯನ್ನು ಅಭಿನಂದಿಸಿದ್ದಾರೆ.
ಡಿಆರ್ಡಿಒ 4ನೇ ತಲೆಮಾರಿನ, ತಾಂತ್ರಿಕವಾಗಿ ಸುಧಾರಿತ ಮಿನಿಯೇಚರೈಸ್ಡ್ ವೆಪನ್ ಸಿಸ್ಟಮ್ VSHORADS ನ ಮೂರು ಕ್ಷಿಪಣಿಗಳ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಕ್ಷಿಪಣಿಯು ಶತ್ರುಗಳ ವೈಮಾನಿಕ ದಾಳಿಗಳ ವಿರುದ್ಧ ಸಶಸ್ತ್ರ ಪಡೆಗಳಿಗೆ ಮತ್ತಷ್ಟು ತಾಂತ್ರಿಕ ಉತ್ತೇಜನವನ್ನು ನೀಡುತ್ತದೆ ಎಂದು ರಕ್ಷಣಾ ಸಚಿವಾಲಯ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ವಿಮಾನಗಳು, ಡ್ರೋನ್‌ಗಳು ಮತ್ತು ಇತರ ವೈಮಾನಿಕ ಸಾಧನಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಅಭಿವೃದ್ಧಿಯು ಕಳೆದ ಕೆಲವು ವರ್ಷಗಳಿಂದ ಪ್ರಗತಿಯಲ್ಲಿತ್ತು. ಇದೀಗ, ಅದರ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ನಿಗದಿತ ಗುರಿ ಮುಟ್ಟಿ ಯಶಸ್ವಿಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳು ಇಂತಹ ಕ್ಷಿಪಣಿಗಳಿಗಾಗಿ ರಷ್ಯಾವನ್ನು ಅವಲಂಬಿಸಿತ್ತು. ಇದೀಗ ಸ್ವದೇಶಿ ನಿರ್ಮಿತ ವ್ಯವಸ್ಥೆಯಿಂದಾಗಿ ಸ್ವಾವಲಂಬನೆ ಸಾಧಿಸಬಹುದಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಅತ್ಯಾಚಾರದ ಆರೋಪಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್ - sc grants bail POCSO rape accused